
ನವದೆಹಲಿ.ಆ.೫: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಪ್ರಮುಖ ರಿಪೋ ದರವನ್ನು ಸತತ ನಾಲ್ಕನೇ ಬಾರಿಗೆ ಶೇಕಡಾ ೫.೨೫ ರಲ್ಲೇ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ನಿರ್ಧರಿಸಿದೆ.
ಸಾಲದ ಮೇಲಿನ ಬಡ್ಡಿ ದರಗಳಲ್ಲಿ ಸ್ಥಿರತೆ ಕಾಯ್ದುಕೊಂಡಿರುವುದು ಬರಲಿರುವ ಹಬ್ಬದ ಋತುವಿನಲ್ಲಿ ವಸತಿ ವಲಯಕ್ಕೆ ಹಾಗೂ ಮನೆ ಖರೀದಿ ಆಕಾಂಕ್ಷಿಗಳಿಗೆ ಹೊಸ ಭರವಸೆ ನೀಡಿದೆ. ಆದರೆ, ಮತ್ತೊಂದೆಡೆ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದ ಹೆಚ್ಚುತ್ತಿರುವ ನಿರ್ಮಾಣ ವೆಚ್ಚವು ಮನೆಗಳ ಅಂತಿಮ ಬೆಲೆಯನ್ನು ಹೆಚ್ಚಿಸುತ್ತಿದ್ದು, ಮಧ್ಯಮ ಹಾಗೂ ಬಜೆಟ್ ವರ್ಗದ ಗ್ರಾಹಕರ ಕೈಗೆಟುಕುವ ಶಕ್ತಿಗೆ ಕಂಠಕವಾಗಿ ಪರಿಣಮಿಸಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ, ಜಾಗತಿಕ ರಾಜಕೀಯ ಅಸ್ಥಿರತೆ ಮತ್ತು ಇಂಧನ ಬೆಲೆಗಳ ಏರಿಳಿತದ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯನ್ನು ಸರಿದೂಗಿಸಲು ಆರ್‌ಬಿಐ ಈ ಜಾಗರೂಕತೆಯ ನಿರ್ಧಾರ ತಳೆದಿದೆ.ಭಾರತದಲ್ಲಿ ವರ್ಷದ ದ್ವಿತೀಯಾರ್ಧ ಹಾಗೂ ಹಬ್ಬಗಳ ಸಮಯದಲ್ಲಿ ಗೃಹ ಖರೀದಿ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತದೆ. ಬಡ್ಡಿದರದಲ್ಲಿ ಬದಲಾವಣೆ ಇಲ್ಲದಿರುವುದು ಮನೆ ಖರೀದಿದಾರರಿಗೆ ನಿಶ್ಚಿತತೆಯ ಭಾವನೆ ಮೂಡಿಸಿದೆ.
“ಆರ್‌ಬಿಐ ನಿರ್ಧಾರವು ಹಬ್ಬದ ಆವೃತ್ತಿಗೆ ಮುನ್ನ ಮಾರುಕಟ್ಟೆಗೆ ಧನಾತ್ಮಕ ಸಂದೇಶ ನೀಡಿದೆ. ಸ್ಥಿರ ಗೃಹ ಸಾಲದ ಕಂತುಗಳು (ಇಎಮ್‌ಐ) ಗ್ರಾಹಕರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದ್ದು, ಪ್ರೀಮಿಯಂ ಹಾಗೂ ಮಧ್ಯಮ ಆದಾಯದ ವಸತಿ ವಿಭಾಗದಲ್ಲಿ ಮಾರಾಟದ ವೇಗವನ್ನು ಕಾಯ್ದುಕೊಳ್ಳಲು ನೆರವಾಗಲಿದೆ.”
ಬಡ್ಡಿದರಗಳು ಸ್ಥಿರವಾಗಿದ್ದರೂ, ಸಿಮೆಂಟ್, ಕಬ್ಬಿಣ ಸೇರಿದಂತೆ ಮೂಲಭೂತ ನಿರ್ಮಾಣ ಸಾಮಗ್ರಿಗಳ ವೆಚ್ಚ ಹೆಚ್ಚಾಗುತ್ತಿರುವುದು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿದೆ. ಡೆವಲಪರ್‌ಗಳು ಈ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆ ವರ್ಗಾಯಿಸುವ ಸಾಧ್ಯತೆ ಇದ್ದು, ಅಪಾರ್ಟ್‌ಮೆಂಟ್‌ಗಳ ಬೆಲೆ ಮತ್ತಷ್ಟು ದುಬಾರಿಯಾಗುವ ಆತಂಕವಿದೆ.
ಜೆಎಲ್‌ಎಲ್ (ಎಐಐ) ಸಂಸ್ಥೆಯ ಹಿರಿಯ ವ್ಯವಸ್ಥಾಪಕ ನಿರ್ದೇಶಕಿ ಲತಾ ಪಿಳ್ಳೈ ಅವರ ಪ್ರಕಾರ, “ಆರ್‌ಬಿಐ ನಿರ್ಧಾರವು ಪ್ರಸಕ್ತ ಮಾರುಕಟ್ಟೆಗೆ ಅನುಕೂಲಕರವಾಗಿದ್ದರೂ, ನಿರ್ಮಾಣ ವೆಚ್ಚದ ಏರಿಕೆಯು ಕೈಗೆಟುಕುವ ಬೆಲೆಯ ಮನೆಗಳ ವಿಭಾಗದ ಮೇಲೆ ನೇರ ಪರಿಣಾಮ ಬೀರಲಿದೆ.”
ಸದ್ಯ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಬೆಳವಣಿಗೆಯು ಐಷಾರಾಮಿ ಹಾಗೂ ಪ್ರೀಮಿಯಂ ಮನೆಗಳ ವಿಭಾಗಕ್ಕೆ ಮಾತ್ರ ಸೀಮಿತವಾಗಿದ್ದು, ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಬಜೆಟ್ ಮನೆಗಳ ಮಾರುಕಟ್ಟೆ ಹಿನ್ನಡೆ ಅನುಭವಿಸುತ್ತಿದೆ.
ದೇಶದ ಪ್ರಮುಖ ೭ ಮೆಟ್ರೋ ನಗರಗಳಲ್ಲಿ ವಸತಿ ಬೆಲೆಗಳು ಸರಾಸರಿ ವಾರ್ಷಿಕ ಶೇ. ೭ ರಷ್ಟು ಹೆಚ್ಚುತ್ತಿವೆ.ಆನರಾಕ್ (ಂಓಂಖಔಅಏ) ನೀಡಿದ ಪ್ರಸಕ್ತ ಸಾಲಿನಲ್ಲಿನ ದ್ವಿತೀಯ ತ್ರೈಮಾಸಿಕ ವರದಿಯಂತೆ, ಒಟ್ಟು ಹೊಸ ಯೋಜನಾ ಚಾಲನೆಗಳಲ್ಲಿ ಬಜೆಟ್ ಮನೆಗಳ ಪಾಲು ಕೇವಲ ಶೇ. ೬ ಕ್ಕೆ ಕುಸಿದಿದೆ.ಅಗ್ರ ನಗರಗಳಲ್ಲಿ ಒಟ್ಟು ಮನೆಗಳ ಮಾರಾಟದಲ್ಲಿ ಶೇ. ೬ ರಷ್ಟು ವಾರ್ಷಿಕ ಇಳಿಕೆ ಕಂಡುಬಂದಿದೆ.
ಆನರಾಕ್ ಸಮೂಹದ ಅಧ್ಯಕ್ಷ ಅನುಜ್ ಪುರಿ ಮಾತನಾಡಿ, “ಕೈಗೆಟುಕುವ ವಸತಿ ವಿಭಾಗವು ಬಡ್ಡಿದರಗಳಿಗೆ ಅತ್ಯಂತ ಸೂಕ್ಷ್ಮವಾಗಿದೆ. ಕೇವಲ ಬಡ್ಡಿದರ ಯಥಾಸ್ಥಿತಿಯಲ್ಲಿದ್ದ ತಕ್ಷಣವೇ ಈ ವಿಭಾಗ ಚೇತರಿಸಿಕೊಳ್ಳಲು ಸಾಧ್ಯವಿಲ್ಲ. ಸಂಪೂರ್ಣ ಮಾರುಕಟ್ಟೆಯನ್ನು ಚೇತರಿಸುವಂತೆ ಮಾಡಲು ಬಜೆಟ್ ಮನೆಗಳ ಪೂರೈಕೆ ಮತ್ತು ರಿಯಾಯಿತಿ ಅಗತ್ಯ,” ಎಂದಿದ್ದಾರೆ.
ಕ್ರೆಡಾಯ್ ರಾಷ್ಟ್ರೀಯ ಅಧ್ಯಕ್ಷ ಶೇಖರ್ ಪಟೇಲ್ ಆರ್‌ಬಿಐ ಕ್ರಮವನ್ನು ಸ್ವಾಗತಿಸಿದ್ದು, “ರಿಯಲ್ ಎಸ್ಟೇಟ್ ಸುದೀರ್ಘ ಹೂಡಿಕೆಯ ಕ್ಷೇತ್ರ. ಆರ್‌ಬಿಐನ ಬಡ್ಡಿದರ ಸ್ಥಿರತೆಯು ಡೆವಲಪರ್‌ಗಳಿಗೆ ಹೊಸ ಯೋಜನೆಗಳ ಯೋಜನೆಯನ್ನು ಸುಲಭಗೊಳಿಸುತ್ತದೆ ಮತ್ತು ಯೋಜನಾ ವೆಚ್ಚದ ಸ್ಪಷ್ಟತೆಯನ್ನು ನೀಡುತ್ತದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.


































