Home ಮುಖಪುಟ ಸುದ್ದಿ ಚಂಡೀಪುರ ವೈರಸ್: ಗುಜರಾತ್‌ನಲ್ಲಿ ೨೨ ಮಕ್ಕಳು ಸಾವು

ಚಂಡೀಪುರ ವೈರಸ್: ಗುಜರಾತ್‌ನಲ್ಲಿ ೨೨ ಮಕ್ಕಳು ಸಾವು

ಅಹಮದಾಬಾದ್,ಆ.೫- ಗುಜರಾತ್‌ನಲ್ಲಿ ಚಂಡೀಪುರ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಈವರೆಗೆ ೨೨ ಮಕ್ಕಳು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ವರದಿಯಾದ ಒಟ್ಟು ೧೮೪ ಶಂಕಿತ ಪ್ರಕರಣಗಳ ಪೈಕಿ ೩೫ ಪ್ರಕರಣಗಳಲ್ಲಿ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಆರೋಗ್ಯ ಸಚಿವ ಪ್ರಫುಲ್ ಪಾನ್ಸೇರಿಯಾ ನೀಡಿರುವ ಮಾಹಿತಿಯಂತೆ, ಪ್ರಸ್ತುತ ೧೧ ಮಾದರಿಗಳ ತಪಾಸಣಾ ವರದಿ ಬರಬೇಕಿದ್ದು, ೭ ಮಕ್ಕಳು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ೬ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.


ತೀವ್ರ ಜ್ವರ, ವಾಂತಿ, ಮೂರ್ಛೆ/ಸೆಳೆತ ವಿಪರೀತ ತೂಕಡಿಕೆ ಹಾಗೂ ದಿಢೀರ್ ನಡವಳಿಕೆ ಬದಲಾವಣೆ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ದಾಖಲಿಸುವಂತೆ ಪೋಷಕರಿಗೆ ಸೂಚಿಸಲಾಗಿದೆ. ಈ ವೈರಸ್ ಮುಖ್ಯವಾಗಿ ಮರಳು ನೊಣಗಳಿಂದ ಹರಡುವುದರಿಂದ, ಮಣ್ಣಿನ ಮನೆಗಳ ಗೋಡೆಗಳಲ್ಲಿರುವ ಬಿರುಕುಗಳನ್ನು ಮುಚ್ಚಲು ಮತ್ತು ಪಶು ಸಂಗೋಪನಾ ಪ್ರದೇಶಗಳಲ್ಲಿ ಕೀಟನಾಶಕ ಸಿಂಪಡಣೆಗೆ ಸಹಕರಿಸಲು ಮನವಿ ಮಾಡಲಾಗಿದೆ.


ಪ್ರಸ್ತುತ ಈ ವೈರಸ್‌ಗೆ ನಿರ್ದಿಷ್ಟ ಲಸಿಕೆ ಅಥವಾ ಆಂಟಿವೈರಲ್ ಔಷಧ ಲಭ್ಯವಿಲ್ಲದ ಕಾರಣ, ಲಕ್ಷಣಗಳು ಕಂಡುಬಂದ ತಕ್ಷಣವೇ ಐಸಿಯು ಸೌಲಭ್ಯವಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವುದು ಅತ್ಯಗತ್ಯ.


ಸ್ಥಿತಿ ಚಿಂತಾಜನಕವಾಗಿದ್ದರೂ ಸಾರ್ವಜನಿಕರು ಆತಂಕಪಡದೆ, ವದಂತಿಗಳಿಗೆ ಕಿವಿಗೊಡದೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರ ಮನವಿ ಮಾಡಿದೆ.