
ಸಂಜೆವಾಣಿ ವಾರ್ತೆ,
ವಿಜಯಪುರ, ಜು. ೩೦: ಜಿಲ್ಲೆಯ ನೀರಾವರಿ ಕಾಲುವೆಗಳಿಗೆ ನೀರು ಹರಿಸುವ ದಿನಾಂಕ, ಅವಧಿ ಹಾಗೂ ವೇಳಾಪಟ್ಟಿಯನ್ನು ಮುಂಚಿತವಾಗಿಯೇ ಪ್ರಕಟಿಸಿ, ರೈತರಿಗೆ ವಾಟ್ಸಾಪ್ ಸೇರಿದಂತೆ ಡಿಜಿಟಲ್ ಮಾಧ್ಯಮಗಳ ಮೂಲಕ ನಿಯಮಿತ ಮಾಹಿತಿ ತಲುಪಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಜಿಲ್ಲಾಧಿಕಾರಿ ಡಾ. ಆನಂದ ಅವರಿಗೆ ಮನವಿ ಸಲ್ಲಿಸಿದೆ.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸಂಘದ ಕರ್ನಾಟಕ ಪ್ರದೇಶ ರಾಜ್ಯಾಧ್ಯಕ್ಷ ಭೀಮಸೇನ ಕೊಕರೆ, “ಆಲಮಟ್ಟಿ ಜಲಾಶಯದಲ್ಲಿ ಸಮರ್ಪಕ ನೀರಿನ ಸಂಗ್ರಹವಿದ್ದರೂ, ಯಾವ ಕಾಲುವೆಗೆ ಯಾವ ದಿನದಿಂದ ಎಷ್ಟು ದಿನ ನೀರು ಹರಿಸಲಾಗುತ್ತದೆ ಎಂಬ ಸ್ಪಷ್ಟ ಮಾಹಿತಿ ರೈತರಿಗೆ ಸಿಗುತ್ತಿಲ್ಲ. ಮಾಹಿತಿ ಕೊರತೆಯಿಂದ ಬಿತ್ತನೆ, ನೀರಾವರಿ ಹಾಗೂ ಕೃಷಿ ಕಾರ್ಯಗಳ ಯೋಜನೆಗೆ ಅಡಚಣೆ ಉಂಟಾಗುತ್ತಿದೆ” ಎಂದು ಹೇಳಿದರು.
ಜಿಲ್ಲಾಡಳಿತ ಹಾಗೂ ನೀರಾವರಿ ಇಲಾಖೆ ಕಾಲುವೆವಾರು ನೀರು ಬಿಡುವ ವೇಳಾಪಟ್ಟಿಯನ್ನು ಮುಂಚಿತವಾಗಿ ಪ್ರಕಟಿಸಬೇಕು. ಅಲ್ಲದೆ, ಸಂಬAಧಿತ ರೈತರ ವಾಟ್ಸಾಪ್ ಗುಂಪುಗಳನ್ನು ರಚಿಸಿ ನೀರು ಹರಿಸುವ ದಿನಾಂಕ, ವಿದ್ಯುತ್ ವ್ಯತ್ಯಯ, ತುರ್ತು ಬದಲಾವಣೆ ಸೇರಿದಂತೆ ಎಲ್ಲ ಮಾಹಿತಿಯನ್ನು ಕ್ಷಣಕ್ಷಣಕ್ಕೂ ತಲುಪಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಬಬಲೇಶ್ವರ ತಾಲ್ಲೂಕಿನ ದೇವರಗೆಣ್ಣೂರ ಕೆಇಬಿ ಉಪಕೇಂದ್ರದಲ್ಲಿ ವಿದ್ಯುತ್ ಪೂರೈಕೆಯ ಮಾಹಿತಿ ರೈತರಿಗೆ ಸಂದೇಶದ ಮೂಲಕ ನೀಡುತ್ತಿರುವ ಮಾದರಿಯನ್ನೇ ಜಿಲ್ಲೆಯ ಎಲ್ಲಾ ನೀರಾವರಿ ಕಾಲುವೆಗಳಿಗೂ ವಿಸ್ತರಿಸಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ವಿಜಯಪುರದಲ್ಲಿ ನಿರ್ಮಾಣಗೊಳ್ಳಲಿರುವ ವಾಲಿಬಾಲ್ ಹಾಗೂ ಬಾಸ್ಕೆಟ್‌ಬಾಲ್ ಕ್ರೀಡಾಂಗಣಗಳ ಕಾಮಗಾರಿ ಆರಂಭಿಸುವ ಮುನ್ನ ಕ್ರೀಡಾ ಸಂಘಗಳು, ರಾಷ್ಟ್ರೀಯ ಮಟ್ಟದ ಆಟಗಾರರು ಹಾಗೂ ತಾಂತ್ರಿಕ ಪರಿಣತ ಎಂಜಿನಿಯರ್‌ಗಳೊAದಿಗೆ ಸಮಾಲೋಚನೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕನಕದಾಸ ಬಡಾವಣೆಯಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಕಂಡುಬAದಿರುವ ಕೆಲವು ತಾಂತ್ರಿಕ ಕೊರತೆಗಳು ಹೊಸ ಕಾಮಗಾರಿಗಳಲ್ಲಿ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿ, ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣಗಳನ್ನು ನಿರ್ಮಿಸಬೇಕು ಎಂದು ಸಂಘ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಗುರುನಾಥ ಬಗಲಿ ಸೇರಿದಂತೆ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.






























