Home ಮುಖಪುಟ ಸುದ್ದಿ ಒಂದು ವಾರ ರಾಜ್ಯಾದ್ಯಂತ ಮಳೆ ಮುನ್ಸೂಚನೆ : ಬೆಂಗಳೂರಿಗೆ ಯೆಲ್ಲೋ ಅಲರ್ಟ್

ಒಂದು ವಾರ ರಾಜ್ಯಾದ್ಯಂತ ಮಳೆ ಮುನ್ಸೂಚನೆ : ಬೆಂಗಳೂರಿಗೆ ಯೆಲ್ಲೋ ಅಲರ್ಟ್

ಬೆಂಗಳೂರು, ಸೆ.೨೦: ರಾಜಧಾನಿ ಬೆಂಗಳೂರಿನಲ್ಲಿ ತಡ ರಾತ್ರಿಯಿಂದಲೇ ಜಿಟಿಜಿಟಿ ಮಳೆ ಮುಂದುವರಿದಿದ್ದು, ಇಂದು ಬೆಳಗ್ಗೆಯೂ ನಗರದ ಹಲವು ಭಾಗಗಳಲ್ಲಿ ಮಳೆಯಾಗಿದೆ. ಟೌನ್‌ಹಾಲ್, ಕೆ.ಆರ್.ಮಾರ್ಕೆಟ್, ಎಸ್‌ಪಿ ರಸ್ತೆ, ಚಿಕ್ಕಪೇಟೆ, ಸುಧಾಮನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಸುರಿದಿದ್ದು, ನಗರದ ವಾತಾವರಣ ಸಂಪೂರ್ಣ ತಂಪಾಗಿದೆ.


ಮಳೆಯೊಂದಿಗೆ ತಣ್ಣನೆಯ ಗಾಳಿ ಬೀಸುತ್ತಿದ್ದು, ನಗರದ ಜನತೆ ತಣ್ಣನೆಯ ವಾತಾವರಣದ ಅನುಭವ ಪಡೆಯುತ್ತಿದ್ದಾರೆ. ಈ ವರ್ಷದ ಅವಧಿಯಲ್ಲಿ ಬೆಂಗಳೂರಿನಲ್ಲಿ ಕನಿಷ್ಠ ಮಟ್ಟಕ್ಕೆ ತಾಪಮಾನ ಇಳಿಕೆಯಾಗಿದೆ. ಹಳೆ ಮದ್ರಾಸ್ ರಸ್ತೆಯಲ್ಲಿ ಇಂದು ಬೆಳಗ್ಗೆ ೧೮.೨ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ನಗರದ ಗರಿಷ್ಠ ತಾಪಮಾನ ೩೦ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸದ್ಯ ನಗರದಲ್ಲಿ ಸುಮಾರು ೨೪ ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ತಂಪಾದ ವಾತಾವರಣ ಮುಂದುವರಿದಿದೆ.


೪೯ ಮಿ.ಮೀ. ಸರಾಸರಿ ಮಳೆ


ನಿನ್ನೆ ರಾತ್ರಿ ಆರಂಭಗೊಂಡ ಮಳೆ ಇದೀಗಲೂ ನಗರದ ಹಲವು ಭಾಗಗಳಲ್ಲಿ ಮುಂದುವರಿದಿದೆ. ಕಳೆದ ರಾತ್ರಿ ನಗರದಲ್ಲಿ ಸರಾಸರಿ ಸುಮಾರು ೪೯ ಮಿ.ಮೀ. ಮಳೆ ದಾಖಲಾಗಿದೆ. ಈ ಪೈಕಿ ಬೆಳ್ಳಂದೂರಿನಲ್ಲಿ ಅತಿ ಹೆಚ್ಚು ೮೨.೪ ಮಿ.ಮೀ. ಮಳೆಯಾಗಿದೆ.

ನಗರದ ವಿವಿಧೆಡೆ ದಾಖಲಾಗಿರುವ ಮಳೆ ಪ್ರಮಾಣ ಹೀಗಿದೆ:
ಬೆಳ್ಳಂದೂರು – ೮೨.೪ ಮಿ.ಮೀ.
ಬ್ರೂಕ್‌ಫೀಲ್ಡ್ಸ್ – ೭೨.೪ ಮಿ.ಮೀ.
ವೈಟ್‌ಫೀಲ್ಡ್ – ೫೯.೨ ಮಿ.ಮೀ.
ಗೊಟ್ಟಿಗೆರೆ – ೫೪ ಮಿ.ಮೀ.
ಕೋರಮಂಗಲ – ೫೨.೬ ಮಿ.ಮೀ.
ಆವಲಹಳ್ಳಿ – ೫೧ ಮಿ.ಮೀ.
ಎಚ್‌ಎಸ್‌ಆರ್ ಲೇಔಟ್ – ೪೮ ಮಿ.ಮೀ.
ಎಲೆಕ್ಟ್ರಾನಿಕ್ ಸಿಟಿ – ೪೭.೪ ಮಿ.ಮೀ.
ನಾಗವಾರ – ೪೭.೪ ಮಿ.ಮೀ.
ಕೆ.ಆರ್.ಪುರಂ – ೪೬.೮ ಮಿ.ಮೀ.
ಬಿಐಎಎಲ್ ಏರ್‌ಪೋರ್ಟ್ ರಸ್ತೆ – ೪೪.೮ ಮಿ.ಮೀ.
ವರ್ತೂರು – ೪೩ ಮಿ.ಮೀ.
ದೇವನಹಳ್ಳಿ – ೪೨.೮ ಮಿ.ಮೀ.
ಮಹದೇವಪುರ – ೪೨.೬ ಮಿ.ಮೀ.
ಮಾರತ್‌ಹಳ್ಳಿ – ೩೯.೬ ಮಿ.ಮೀ.
ಸರ್ಜಾಪುರ ರಸ್ತೆ – ೩೪.೬ ಮಿ.ಮೀ.
ಜಯನಗರ – ೨೬.೬ ಮಿ.ಮೀ.
ಜೆ.ಪಿ.ನಗರ – ೨೪.೪ ಮಿ.ಮೀ.
ಕಮ್ಮನಹಳ್ಳಿ – ೨೧.೮ ಮಿ.ಮೀ.
ಬನಶಂಕರಿ – ೨೦.೪ ಮಿ.ಮೀ.
ಆರ್.ಟಿ.ನಗರ – ೧೭.೨ ಮಿ.ಮೀ.
ಎಂ.ಜಿ.ರಸ್ತೆ – ೧೬.೪ ಮಿ.ಮೀ.
ರಾಜರಾಜೇಶ್ವರಿ ನಗರ – ೧೩.೨ ಮಿ.ಮೀ.
ನ್ಯೂ ಬಿಇಎಲ್ ರಸ್ತೆ – ೧೧.೨ ಮಿ.ಮೀ.
ಯಲಹಂಕ – ೯.೬ ಮಿ.ಮೀ.

ವಾರವಿಡೀ ಮಳೆ ಸಾಧ್ಯತೆ :


ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ತೀವ್ರತೆ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರ ರಾಜ್ಯದಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ ಅವರ ಪ್ರಕಾರ, ಮುಂದಿನ ಒಂದು ವಾರ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಇಂದು ಮತ್ತು ನಾಳೆ ರಾಜ್ಯದ ೧೩ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.


ಬೀದರ್, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.


ಬೆಂಗಳೂರಿನಲ್ಲಿಯೂ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಗಂಟೆಗೆ ೪೦ ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.


ಇಂದು ಭಾರೀ ಮಳೆ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಮುಂದುವರಿದಿದ್ದು, ನಗರದಲ್ಲಿ ಮಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.