
ಪಾವಗಡ, ಜು. ೨೭- ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸಿಡಿಪಿಓ ಸುನಿತಾ ಡಿ.ಜಿ. ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಬಾಲ ಭವನ ಸಮಿತಿ, ತಾಲ್ಲೂಕು ಭಾಲ ಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ತಾಲ್ಲೂಕು ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಬುದ್ಧಿಶಕ್ತಿಯನ್ನು ಒರೆಗೆ ಹಚ್ಚುವುದು ಪರೀಕ್ಷೆಗಳ ಹೊರತಾಗಿ ರಸಪ್ರಶ್ನೆ ಸ್ಪರ್ಧೆಗಳಲ್ಲಿ, ನಾವು ಇನ್ನಷ್ಟು ಕಲಿಯಬೇಕು ಎನ್ನುವ ಹಂಬಲ ಮತ್ತು ಕುತೂಹಲವಿರುವ ವೇದಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಭಾಗವಹಿಸಬೇಕು ಎಂದರು.
ಶೈಕ್ಷ ಣಿಕ ಗುಣಮಟ್ಟ ಸುಧಾರಣೆಗೆ ರಸಪ್ರಶ್ನೆ ಕಾರ್ಯಕ್ರಮ ಅಗತ್ಯವಾಗಿದೆ. ವಿದ್ಯಾರ್ಥಿಗಳ ಬೌದ್ಧಿಕ ಜ್ಞಾನ ವಿಸ್ತರಣೆಗೂ ರಸಪ್ರಶ್ನೆ ಕಾರ್ಯಕ್ರಮ ಅತ್ಯಂತ ಸಹಕಾರಿಯಾಗಿದೆ ಎಂದರು.
ಇಂದಿನ ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕ ಚೆನ್ನಾಗಿ ಓದಿ ಮನನ ಮಾಡಿ ಅನಗತ್ಯ ಮೊಬೈಲ್ ಬಳಕೆ ಕಡಿಮೆ ಮಾಡಿ ಎಂದು ಸಲಹೆ ನೀಡಿದರು.
ಇಂದಿನ ಎಐ ಯುಗದಲ್ಲಿ ಮೊಬೈಲ್‌ಗೆ ದಾಸರಾಗದೆ ರಸ ಪ್ರಶ್ನೆಗಳಂತಹ ಕಾರ್ಯಕ್ರಮಗಳಲ್ಲಿ ಇತರೆ ಶಾಲೆಯ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿದಾಗ ನಿಮ್ಮ ಸಾಮರ್ಥ್ಯ ತಿಳಿಯಬಹುದು ಎಂದರು.
ತರಗತಿಯೊಳಗಿನ ಶಿಕ್ಷ ಣ ಒಂದೇ ಜೀವನ ರೂಪಿಸುವುದಿಲ್ಲ. ತರಗತಿಯ ಹೊರಗಿನ ಪರಿಸರವೂ ಕೂಡಾ ಜೀವನ ರೂಪಿಸಲು ಮುಖ್ಯವಾಗಿರುತ್ತದೆ ಎಂದರು.
ಸ್ಪರ್ಧೆಯಲ್ಲಿ ಸೋಲು-ಗೆಲುವು ಸಹಜ. ವಿದ್ಯಾರ್ಥಿಗಳು ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದರು.
ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮಿನರಸಮ್ಮ ಮಾತನಾಡಿ, ಮಕ್ಕಳಲ್ಲಿರುವ ಸ್ತುಪ್ತ ಪ್ರತಿಭೆಗಳನ್ನು ಹೊರತರಲು ಇದು ಒಂದು ಉತ್ತಮ ವೇದಿಕೆ. ರಸಪ್ರಶ್ನೆ ಕಾರ್ಯಕ್ರಮ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದರು.
ಸ್ಪರ್ಧೆಯಲ್ಲಿ ಪಟ್ಟಣದ ಸುಮಾರು ೧೫ ಶಾಲೆಗಳಿಗಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಮಾಧ್ಯಮಿಕ ಮತ್ತು ಪ್ರೌಢಶಾಲೆ ವಿಭಾಗಗಳಲ್ಲಿ ಜ್ಞಾನ ಬೋಧನಿ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟದ ಸ್ಪರ್ಧಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿದೆ.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಾಧಿಕ್, ರಾಮಕೃಷ್ಣ, ನಟರಾಜ್, ನಾಗರಾಜ್ ನಾಯ್ಕ್, ನಿರ್ಮಲಾ, ರೇಖಾ ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.
ಹನುಮಂತರಾಯಪ್ಪ ಕಾರ್ಯಕ್ರಮ ನಿರೂಪಿಸಿದರು.


































