
ನವದೆಹಲಿ.ಜು೨೬:ಸಾರ್ವಜನಿಕ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ’ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ-೨೦೨೬’ ಅನ್ನು ಸಿದ್ಧಪಡಿಸಿದ್ದು ನಾಳೆ ಲೋಕಸಭೆಯಲ್ಲಿ ಮಂಡಿಸಲಿದೆ.
ಹೊಸ ವಿಧೇಯಕದಲ್ಲಿ ತನಿಖೆ ಮತ್ತು ವಿಚಾರಣೆಗೆ ಸ್ಪಷ್ಟ ಕಾಲಮಿತಿ ನಿಗದಿಪಡಿಸಲಾಗಿದ್ದು, ಶಿಕ್ಷೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ ಈ ಹಿಂದೆ ೩ ರಿಂದ ೫ ವರ್ಷಗಳಿದ್ದ ಜೈಲು ಶಿಕ್ಷೆಯನ್ನು ಹೊಸ ವಿಧೇಯಕದಲ್ಲಿ ಕನಿಷ್ಠ ೫ ವರ್ಷದಿಂದ ೧೦ ವರ್ಷಕ್ಕೆ ಹೆಚ್ಚಿಸಲಾಗಿದೆ.
ಹಾಗೆಯೇ ದಂಡದ ಪ್ರಮಾಣವನ್ನು ೧೦ ಲಕ್ಷದಿಂದ ೫೦ ಲಕ್ಷಕ್ಕೆ ಏರಿಸಲಾಗಿದೆ.ಸಂಘಟಿತ ಅಪರಾಧ ಪೇಪರ್ ಲೀಕ್ ದಂಧೆಯಲ್ಲಿ ತೊಡಗುವ ನೆಟ್‌ವರ್ಕ್‌ಗಳಿಗೆ ಕನಿಷ್ಠ ೭ ವರ್ಷದಿಂದ ೧೦ ವರ್ಷದವರೆಗೆ ಜೈಲು ಶಿಕ್ಷೆ ಮತ್ತು ೧೦ ಕೋಟಿ ದಂಡ ವಿಧಿಸಲು ಪ್ರಸ್ತಾಪಿಸಲಾಗಿದೆ.ಸೇವಾ ಸಂಸ್ಥೆಗಳಿಗೆ ದಂಡ ಪರೀಕ್ಷೆ ನಡೆಸುವ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಕ್ರಮದಲ್ಲಿ ಭಾಗಿಯಾಗಿದ್ದರೆ ಅವರಿಗೆ ೫ ಕೋಟಿಯವರೆಗೆ ದಂಡ ವಿಧಿಸಲಾಗುತ್ತದೆ.
ಹೊಸ ಕಾನೂನಿನಲ್ಲಿ ತನಿಖಾ ಸಂಸ್ಥೆಗಳು ಅಥವಾ ’ವಿಶೇಷ ಕಾರ್ಯಪಡೆ’ ಕೇಸು ದಾಖಲಾದ ೨ ತಿಂಗಳ ಒಳಗಾಗಿ ಸಂಪೂರ್ಣ ತನಿಖೆ ಮುಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ.ಪ್ರಕರಣದ ಶೀಘ್ರ ವಿಚಾರಣೆಗಾಗಿ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೈಕೋರ್ಟ್ ಜೊತೆ ಚರ್ಚಿಸಿ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತದೆ.
ಚಾರ್ಜ್‌ಶೀಟ್ ಸಲ್ಲಿಕೆಯಾದ ನಂತರ ದಿನನಿತ್ಯದ ಆಧಾರದಲ್ಲಿ ವಿಚಾರಣೆ ನಡೆಸಿ ೩ ತಿಂಗಳ ಒಳಗಾಗಿ ತೀರ್ಪು ನೀಡಬೇಕೆಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.ನೀಟ್ ಪರೀಕ್ಷೆ ಅಕ್ರಮದಂತಹ ಘಟನೆಗಳ ಹಿನ್ನೆಲೆಯಲ್ಲಿ ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸಲು ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.
*೨ ತಿಂಗಳಲ್ಲಿ ತನಿಖೆ, ಫಾಸ್ಟ್ ಟ್ರ್ಯಾಕ್ ಕೋರ್ಟ್ ವಿಚಾರಣೆ
*ತಪ್ಪಿತಸ್ಥರಿಗೆ ೫ ರಿಂದ ೧೦ ವರ್ಷ ಜೈಲು, ೫೦ಲಕ್ಷದವರೆಗೆ ದಂಡ
*ಸಂಘಟಿತ ಅಪರಾಧಗಳಿಗೆ ಕನಿಷ್ಠ ೭ ವರ್ಷ ಜೈಲು ೧೦ ಕೋಟಿ ದಂಡ
*ಚಾರ್ಜ್‌ಶೀಟ್ ಸಲ್ಲಿಕೆಯಾದ ೩ ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಲು ಪ್ರಸ್ತಾಪ































