Home ಮುಖಪುಟ ಸುದ್ದಿ ಸಿದ್ದು ರಾಜಕೀಯ ನಿವೃತ್ತಿ ಘೋಷಣೆ

ಸಿದ್ದು ರಾಜಕೀಯ ನಿವೃತ್ತಿ ಘೋಷಣೆ

ಮಂಡ್ಯ: ಜು. ೨೬- ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಕೆ.ಆರ್ ಪೇಟೆಯಲ್ಲಿ ದಿ.ಕೆ.ಆರ್.ಪೇಟೆ ಕೃಷ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅವರು ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.

ಈ ವೇಳೆ ಅಭಿಮಾನಿಗಳು ಮುಂದಿನ ೧೦ ವರ್ಷಗಳ ಚುನಾವಣಾ ರಾಜಕೀಯದಲ್ಲಿ ಇರುವಂತೆ ಮನವಿ ಮಾಡಿದ್ದಾರೆ. ಆದರೂ ೨೦೨೮ರ ಚುನಾವಣೆಗೆ ನಾನು ಸ್ಪರ್ಧೆ ಮಾಡಲ್ಲ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ಮೂಲಕ ೨೦೨೮ಕ್ಕೆ ಸ್ಪರ್ಧೆ ಮಾಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಮೇ ೨೮ ರಂದು ರಾಜೀನಾಮೆ ಸಲ್ಲಿಸಿದ್ದರು.ಸಿದ್ದರಾಮಯ್ಯ ಅವರು ಎರಡು ಅವಧಿಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಒಟ್ಟು ೮ ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರ ನಡೆಸುವ ಮೂಲಕ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನೂ ಬರೆದಿದ್ದಾರೆ.

ಈ ಹಿಂದೆಯೂ ಇಂತಹುದ್ದೇ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ
೨೦೧೩ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ, ಇದು ತಮ್ಮ ಕೊನೆಯ ಚುನಾವಣೆ ಎಂದು ಮಾಧ್ಯಮಗಳ ಮುಂದೆ ಸಿದ್ದರಾಮಯ್ಯ ಹೇಳಿದ್ದರು. ಆ ಬಳಿಕ ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರಗಳಿಂದ ಸ್ಪರ್ಧಿಸುವ ಮುನ್ನ, ೨೦೧೮ರ ಚುನಾವಣೆಯು ಬಹುಪಾಲು ತಮ್ಮ ಕೊನೆಯ ಚುನಾವಣೆಯಾಗಲಿದೆ ಎಂದು ಪುನರುಚ್ಚರಿಸಿದ್ದರು. ೨೦೨೪ರ ಏಪ್ರಿಲ್‌ನಲ್ಲಿ ಮೈಸೂರಿನಲ್ಲಿ ಮಾತನಾಡುವ ಸಂದರ್ಭದಲ್ಲಿಯೂ ತನಗೆ ಈಗ ೭೭ ವರ್ಷ. ಈ ಅವಧಿ ಮುಗಿಯುವಾಗ ೮೧-೮೨ ವರ್ಷ ದಾಟಿರುತ್ತದೆ. ಆ ಸಂದರ್ಭದಲ್ಲಿ ಉತ್ಸಾಹದಿಂದ ಕೆಲಸ ಮಾಡಲು ಆರೋಗ್ಯ ಸಹಕರಿಸುವುದಿಲ್ಲ. ಹಾಗಾಗಿ ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದಿದ್ದರು.