Home ಸುದ್ದಿ ಅಂತರಾಷ್ಟ್ರೀಯ ಗುಂಡಿನ ದಾಳಿ ಖಂಡಿಸಿ ನ್ಯೂಯಾರ್ಕ್‌ನಲ್ಲಿ ಪ್ರತಿಭಟನೆ

ಗುಂಡಿನ ದಾಳಿ ಖಂಡಿಸಿ ನ್ಯೂಯಾರ್ಕ್‌ನಲ್ಲಿ ಪ್ರತಿಭಟನೆ

ನ್ಯೂಯಾರ್ಕ್, ಅ.೧೦: ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ಇಲಾಖೆ (ಐಸಿಇ) ಅಧಿಕಾರಿಗಳ ಗುಂಡಿನ ದಾಳಿಯಲ್ಲಿ ಡೊಮಿನಿಕನ್ ಮೂಲದ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಖಂಡಿಸಿ ನ್ಯೂಯಾರ್ಕ್ ನಗರದಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದರು. ಈ ಘಟನೆ ಹಿನ್ನೆಲೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಮೇಯರ್ ಜೊಹ್ರಾನ್ ಮಮ್ದಾನಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನಡುವೆ ವಲಸೆ ನೀತಿ ವಿಚಾರವಾಗಿ ಸಂಘರ್ಷ ತೀವ್ರಗೊಂಡಿದೆ.

ಐಸಿಇ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯ ವೇಳೆ ೨೮ ವರ್ಷದ ಆಸ್ಕರ್ ಬರ್ಗಲ್ ಅವರ ಕುತ್ತಿಗೆಗೆ ಗುಂಡು ತಗುಲಿದೆ. ಆ ಸಮಯದಲ್ಲಿ ಅವರ ವಾಹನದಲ್ಲಿದ್ದ ಐದು ವರ್ಷದ ಮಗು ದೈಹಿಕವಾಗಿ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಈ ಘಟನೆಯ ಬಳಿಕ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ ಮೇಯರ್ ಮಮ್ದಾನಿ, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ “ಐಸಿಇಯನ್ನು ರದ್ದುಗೊಳಿಸಿ” ಎಂದು ಪೋಸ್ಟ್ ಮಾಡಿದ್ದಾರೆ. ಟ್ರಂಪ್ ಆಡಳಿತದ ಕಠಿಣ ವಲಸೆ ನೀತಿಯನ್ನು ವಿರೋಧಿಸುವವರು ಈ ಘೋಷಣೆಯನ್ನು ವ್ಯಾಪಕವಾಗಿ ಬಳಸುತ್ತಿದ್ದು, ಐಸಿಇ ಇಲಾಖೆಯನ್ನೇ ವಿಸರ್ಜಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
ಮೇಯರ್ ಹೇಳಿಕೆಯನ್ನು ಅಮೆರಿಕದ ಗೃಹ ಭದ್ರತಾ ಕಾರ್ಯದರ್ಶಿ ಮಾರ್ಕ್‌ವೇನ್ ಮುಲ್ಲಿನ್ ತೀವ್ರವಾಗಿ ಟೀಕಿಸಿದ್ದಾರೆ. ಇಂತಹ ಹೇಳಿಕೆಗಳು ವಲಸೆ ಅಧಿಕಾರಿಗಳ ವಿರುದ್ಧ ದ್ವೇಷ ಮತ್ತು ಹಗೆತನವನ್ನು ಹೆಚ್ಚಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ನಲ್ಲಿ ಶುಕ್ರವಾರ ನೂರಾರು ಪ್ರತಿಭಟನಾಕಾರರು ಹಲವು ಬ್ಲಾಕ್‌ಗಳಷ್ಟು ದೂರ ಮೆರವಣಿಗೆ ನಡೆಸಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ವೇಳೆ, “ದ್ವೇಷ ಬೇಡ, ಭಯ ಬೇಡ, ವಲಸಿಗರಿಗೆ ಇಲ್ಲಿ ಸ್ವಾಗತ” ಹಾಗೂ “ಐಸಿಇ ಬೇಡ” ಎಂಬ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದ್ದಾರೆ.ಡೆಮಾಕ್ರಟಿಕ್ ಪಕ್ಷದ ಪ್ರಾಬಲ್ಯವಿರುವ ನ್ಯೂಯಾರ್ಕ್ ನಗರ ಸೇರಿದಂತೆ ಅಮೆರಿಕದ ಹಲವು ನಗರಗಳು, ವಲಸೆ ನಿಯಮಗಳ ಜಾರಿ ಕಾರ್ಯಾಚರಣೆಯಲ್ಲಿ ಸ್ಥಳೀಯ ಪೊಲೀಸರು ಫೆಡರಲ್ ಅಧಿಕಾರಿಗಳಿಗೆ ನೆರವು ನೀಡುವುದನ್ನು ನಿರ್ಬಂಧಿಸಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಲಸೆ ನೀತಿ ಮತ್ತು ಸ್ಥಳೀಯ ಆಡಳಿತಗಳ ನಡುವಿನ ಭಿನ್ನಾಭಿಪ್ರಾಯ ಮತ್ತಷ್ಟು ತೀವ್ರಗೊಂಡಿದೆ.