
ಮೈಸೂರು, ಅ10: ನಾಳಿನ ದಸರಾ ಉದ್ಘಾಟನೆಗೂ ಮುನ್ನ ಕೊಪ್ಪಳದ ಗವಿಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಇಂದು ಸುತ್ತೂರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದರು.
ಇಂದು ಸಂಜೆ ಸುತ್ತೂರು ಶ್ರೀ ಮಠಕ್ಕೆ ಆಗಮಿಸಿದ ಶ್ರೀಗಳನ್ನು ಸುತ್ತೂರು ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಆತ್ಮೀಯವಾಗಿ ಬರಮಾಡಿಕೊಂಡರು.
ಉಭಯ ಶ್ರೀಗಳ ಭೇಟಿಯ ವೇಳೆ ಪರಸ್ಪರ ಕುಶಲೋಪರಿ ವಿನಿಮಯ ಮಾಡಿಕೊಂಡು, ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ನಾಳಿನ ದಸರಾ ಉದ್ಘಾಟನೆಯ ಹಿನ್ನೆಲೆಯಲ್ಲಿ ಸುತ್ತೂರು ಶ್ರೀಗಳು ಗವಿಸಿದ್ಧೇಶ್ವರ ಶ್ರೀಗಳಿಗೆ ಶುಭ ಹಾರೈಸಿದರು.
ನಂಜನಗೂಡು ತಾಲೂಕಿನಲ್ಲಿರುವ ಸುತ್ತೂರು ಶ್ರೀ ಕ್ಷೇತ್ರವು ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಂದ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದ್ದು, ಕೊಪ್ಪಳದ ಗವಿಮಠವೂ ಕೂಡ ಬಡವರು, ವಿದ್ಯಾರ್ಥಿಗಳಿಗೆ ನೆರವಾಗುವ ಮೂಲಕ ಜನಮನ್ನಣೆ ಗಳಿಸಿದೆ.
ಇಬ್ಬರು ಹಿರಿಯ ಶ್ರೀಗಳ ಭೇಟಿಯು ಭಕ್ತ ವಲಯದಲ್ಲಿ ವಿಶೇಷ ಗಮನ ಸೆಳೆದಿದ್ದು, ನಾಳಿನ ದಸರಾ ಉದ್ಘಾಟನೆಗೆ ಇದು ಪೂರ್ವಭಾವಿ ಭೇಟಿ ಎಂದು ಹೇಳಲಾಗುತ್ತಿದೆ.
























