Home ಜಿಲ್ಲೆ ತುಮಕೂರು ಪ್ರೊ. ಕೃಷ್ಣಪ್ಪ ದಲಿತ ಸಮುದಾಯದ ಸಂಘಟನಾ ಚೈತನ್ಯದ ಶಕ್ತಿ: ದೊಡ್ಡಾಘಟ್ಟ ಚಂದ್ರೇಶ್

ಪ್ರೊ. ಕೃಷ್ಣಪ್ಪ ದಲಿತ ಸಮುದಾಯದ ಸಂಘಟನಾ ಚೈತನ್ಯದ ಶಕ್ತಿ: ದೊಡ್ಡಾಘಟ್ಟ ಚಂದ್ರೇಶ್

ತುರುವೇಕೆರೆ, ಜೂ. ೧೩- ಪ್ರೊ.ಬಿ.ಕೃಷ್ಣಪ್ಪನವರಲ್ಲಿದ್ದ ನೈತಿಕ ಧೈರ್ಯ, ಮಾನಸಿಕ ಸ್ಥೈರ್ಯ ಪ್ರಸ್ತುತ ದಲಿತ ಸಮುದಾಯಕ್ಕೆ ಸಂಘಟನಾತ್ಮಕ ಶಕ್ತಿ, ಹೋರಾಟದ ಮನೋಭೂಮಿಕೆಯನ್ನು ರೂಪಿಸಿಕೊಟ್ಟಿದೆ ಎಂದು ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಹೇಳಿದರು.


ಪಟ್ಟಣದ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪ ನವರ ೮೯ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೀಸಲಾತಿಯ ಜನಕರು. ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸಬೇಕೆನ್ನುವ ಉದ್ದೇಶದಿಂದ ಕಡ್ಡಾಯ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸಿದರು. ಇನ್ನು ಬಿ.ಕೃಷ್ಣಪ್ಪನವರು ದಲಿತ ಕುಟುಂಬಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಆಶಯದಿಂದ ಸಮಾಜದಲ್ಲಿನ ಅಸಮಾನತೆ, ದಲಿತರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ ಆಚರಣೆಯ ವಿರುದ್ಧ ಚಳವಳಿ ಹೋರಾಟಗಳನ್ನು ನಡೆಸುತ್ತಾ ದಲಿತ ಸಮುದಾಯಕ್ಕೆ ಹೊಸ ಚೈತನ್ಯ ನೀಡಿದ್ದರು ಎಂದರು.


ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ಒಂದು ಉತ್ತಮವಾದ ಸಂವಿಧಾನವನ್ನು ರೂಪಿಸಿಕೊಟ್ಟಿದ್ದಾರೆ. ಸಂವಿಧಾನದ ಕಾನೂನಿನಡಿಯಲ್ಲಿ ಹಾಗೂ ವಿಶ್ವಭ್ರಾತೃತ್ವದ ಪರಿಕಲ್ಪನೆಯಲ್ಲಿ ಪ್ರತಿಯೊಬ್ಬರೂ ಉತ್ತಮ ಬದುಕನ್ನು ಸಾಗಿಸಬೇಕಿದೆ. ಕಷ್ಟದಲ್ಲಿರುವವರಿಗೆ ನೆರವಾಗುವುದೇ ಭಗವಂತನ ನಿಜವಾದ ಸೇವೆ ಎಂದ ಅವರು, ನನ್ನ ಜೀವಮಾನ ಇರುವವರೆಗೂ ಹತ್ತು ಸಾವಿರ ರೂಗಳನ್ನು ನೀಡುತ್ತೇನೆ. ಆ ಹಣವನ್ನು ಪ್ರೊ. ಬಿ.ಕೃಷ್ಣಪ್ಪನವರ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿ ಪ್ರತಿಭಾವಂತರಿಗೆ, ಸಮುದಾಯದ ಪ್ರಗತಿಗೆ ದುಡಿದ ಹಿರಿಯರಿಗೆ ಅರ್ಹ ವ್ಯಕ್ತಿಗೆ ನೀಡಿ ಗೌರವಿಸಿ ಎಂದರು.


ಬಾಣಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕಂಟ್ಲಿ ಮಾತನಾಡಿ, ಯಾವುದೇ ಸಮುದಾಯ ಪ್ರಗತಿ ಸಾಧಿಸಬೇಕಾದರೆ ಸಂಘಟನೆ ಹಾಗೂ ಶಿಕ್ಷಣ ಬಹಳ ಮುಖ್ಯವಾದುದು. ಈ ನಿಟ್ಟಿನಲ್ಲಿ ಹೋರಾಟ ಚಳುವಳಿಗಳ ಮೂಲಕ ದಲಿತ ಸಮುದಾಯದ ಪ್ರಗತಿಗಾಗಿ ದುಡಿದ ಪ್ರೊ.ಬಿ.ಕೃಷ್ಣಪ್ಪನವರ ಬದುಕು ಸಮುದಾಯಕ್ಕೆ ಆದರ್ಶವಾಗಬೇಕಿದೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆದು ಸಂಘಟನಾತ್ಮಕವಾಗಿ ಶೈಕ್ಷಣಿಕ, ರಾಜಕೀಯ ಶಕ್ತಿ ಪಡೆದು ಸಮುದಾಯ ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕಿದೆ ಎಂದರು.


ಸಮಾರಂಭ ಉದ್ಘಾಟಿಸಿದ ಆದಿಜಾಂಬವ ಸಮಾಜದ ಅಧ್ಯಕ್ಷ ವಿ.ಟಿ.ವೆಂಕಟರಾಮಯ್ಯ ಮಾತನಾಡಿ, ಪ್ರಸ್ತುತ ದಲಿತ ಚಳವಳಿಯಲ್ಲಿ ಹೋರಾಟದ ಗಟ್ಟಿತನವಿಲ್ಲದ ಕಾರಣ ರಾಜಕಾರಣಿಗಳು ನಮ್ಮನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಚಳುವಳಿಗಳು ದಾರಿ ತಪ್ಪಬಾರದು. ಸವರ್ಣೀಯರ ಹಾಗೂ ದಲಿತರ ನಡುವೆ ಕಂದಕ ಸೃಷ್ಟಿಸುವ ಕೆಲಸವಾಗಬಾರದು. ನಮ್ಮ ಚಳುವಳಿಗಳು ನ್ಯಾಯಯುತವಾಗಿರಬೇಕು. ಸಮುದಾಯಕ್ಕೆ ಒಳಿತು ಮಾಡುವ ವ್ಯಕ್ತಿ ಹಾಗೂ ಪಕ್ಷವನ್ನು ಬೆಂಬಲಿಸುವುದು ನಮ್ಮ ಹಕ್ಕು ಮತ್ತು ಬಾದ್ಯತೆಯಾಗಿರಬೇಕು. ದಲಿತ ಸಮುದಾಯದ ಮನೆಯ ದೀಪ ಆರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಈ ನಿಟ್ಟಿನಲ್ಲಿ ಸಮುದಾಯ ಸಂಘಟನಾತ್ಮಕವಾಗಿ ಬಲಿಷ್ಠವಾಗಬೇಕಿದೆ ಎಂದರು.


ಪ.ಪಂ. ಮಾಜಿ ಅಧ್ಯಕ್ಷ ಚಿದಾನಂದ್ ಮಾತನಾಡಿ, ಯಾವುದೇ ಒಂದು ಸರ್ಕಾರವನ್ನು ರಚಿಸುವ ಹಾಗೂ ಬೀಳಿಸುವ ಸಾಮರ್ಥ್ಯವನ್ನು ಹೊಂದಿದ್ದ ದಲಿತ ಸಮುದಾಯದ ಶಕ್ತಿ ಇಂದು ಸಂಘಟನೆಯ ಕೊರತೆಯಿಂದ ಕುಂದಿದೆ. ರಾಜ್ಯದಲ್ಲಿ ಎಲ್ಲಾ ಪ್ರಬಲ ಸಮುದಾಯದವರೂ ಮುಖ್ಯಮಂತ್ರಿ ಹುದ್ದೆಗೇರಿದ್ದಾರೆ. ಆದರೆ ದಲಿತ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿ ಸ್ಥಾನ ಏರಲು ಸಾಧ್ಯವಾಗಿಲ್ಲ, ಕಾರಣ ನಮ್ಮಲ್ಲಿರುವ ಸಂಘಟನೆ, ಒಗ್ಗಟ್ಟಿನ ಕೊರತೆ. ದಲಿತ ಸಮುದಾಯದವರಾಗಿ ಅನೇಕ ರಾಜಕೀಯ ಅಧಿಕಾರಗಳನ್ನು ಪಡೆದವರು ಇಂದು ಮುಖ್ಯಮಂತ್ರಿ ಸ್ಥಾನ ಬೇಕೆಂದು ಕೆಲವರು ಆಶಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅವರೆಂದಾದರೂ ದಲಿತ ಸಮುದಾಯದ ಹೋರಾಟದಲ್ಲಿ ಪಾಲ್ಗೊಂಡಿದ್ದಾರಾ, ದಲಿತರ ಕಷ್ಟಸುಖಗಳ ಬಗ್ಗೆ ದಲಿತರ ಕುಟುಂಬದ ಬಳಿ ಬಂದು ವಿಚಾರಿಸಿದ್ದಾರಾ, ಮುಖ್ಯಮಂತ್ರಿ ಸ್ಥಾನ ಪಡೆಯುವುದಕ್ಕಾಗಿ ದಲಿತ ಎಂಬ ಕಾರ್ಡ್ ಉಪಯೋಗಿಸುವ ಅಗತ್ಯವಿಲ್ಲ ಎಂದು ಕಿಡಿಕಾರಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಎಂ.ತಿಮ್ಮೇಶ್ ವಹಿಸಿದ್ದರು. ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಸತ್ಯನಾರಾಯಣ್, ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್, ಬೆಸ್ಕಾಂ ಮಾಜಿ ನಿರ್ದೇಶಕ ಬಿ.ಎಸ್.ವಸಂತಕುಮಾರ್, ಜೆಡಿಎಸ್ ಮುಖಂಡ ಕಲ್ಲಬೋರನಹಳ್ಳಿ ಜಯರಾಮ್, ಕೆಯುಡಬ್ಲೂಜೆ ಜಿಲ್ಲಾ ಕಾರ್ಯದರ್ಶಿ ನಂದೀಶ್, ಉಪನ್ಯಾಸಕ ಡಾ.ಚಂದ್ರಯ್ಯ, ಬೆಸ್ಕಾಂ ಇಲಾಖೆ ಎಸ್.ಒ. ನಾರಾಯಣಪ್ಪ, ಡಾ.ಮುರುಳಿ, ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಡಿಎಸ್‌ಎಸ್ ತಾಲ್ಲೂಕು ಸಂಘಟನಾ ಸಂಚಾಲಕ ಗುರುದತ್ ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.