
ಬೀದರ್: ಜು.31:ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಸ್ಥಳೀಯ ಕಬ್ಬು ಕಟಾವು ಯಂತ್ರಗಳಿಗೆ ಆದ್ಯತೆ ನೀಡಬೇಕು ಎಂದು ಕಲಬುರಗಿ ಹಾಗೂ ಬೀದರ್ ಜಿಲ್ಲಾ ಕಬ್ಬು ಕಟಾವು ಯಂತ್ರಗಳ ಮಾಲೀಕರ ಸಂಘ ಆಗ್ರಹಿಸಿದೆ.
ಸಂಘದ ಪದಾಧಿಕಾರಿಗಳು ನಗರದಲ್ಲಿ ಈ ಕುರಿತು ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದರು.
ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಕಬ್ಬು ಕಟಾವು ಹಂಗಾಮು ವೇಳೆ ಹೊರ ರಾಜ್ಯ ಹಾಗೂ ಬೇರೆ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಕಬ್ಬು ಕಟಾವು ಯಂತ್ರಗಳು ಬರುತ್ತಿವೆ ಎಂದು ಹೇಳಿದರು.
ಹೊರ ರಾಜ್ಯ ಹಾಗೂ ಬೇರೆ ಜಿಲ್ಲೆಗಳ ಯಂತ್ರಗಳಿಗೆ ಆದ್ಯತೆ ಕೊಡುತ್ತಿರುವ ಕಾರಣ ಯಂತ್ರ ಖರೀದಿಸಿ, ಸಾಲ ಮಾಡಿ ಜೀವನ ನಡೆಸುತ್ತಿರುವ ಜಿಲ್ಲೆಯ ಯಂತ್ರಗಳ ಮಾಲೀಕರಿಗೆ ಕೆಲಸ ಕೊರತೆ ಹಾಗೂ ಆರ್ಥಿಕ ಸಂಕಷ್ಟ ಉಂಟಾಗುತ್ತಿದೆ. ಇದರಿಂದ ಯಂತ್ರಗಳ ನಿರ್ವಹಣೆ, ಬ್ಯಾಂಕ್ ಸಾಲ ಮರು ಪಾವತಿ ಹಾಗೂ ಕಾರ್ಮಿಕರ ಸಂಬಳ ಕೊಡಲು ಸಮಸ್ಯೆ ಎದುರಿಸಬೇಕಾಗಿದೆ ಎಂದು ಹೇಳಿದರು.
ರೈತರ ಹಿತ ಹಾಗೂ ಕಬ್ಬು ಮಾಲೀಕರ ಜೀವನೋಪಾಯ ಗಮನದಲ್ಲಿ ಇಟ್ಟುಕೊಂಡು, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳ ಕಬ್ಬು ಕಟಾವು ಯಂತ್ರಗಳಿಗೆ ಮೊದಲ ಆದ್ಯತೆ ಕೊಡಬೇಕು. ಸ್ಥಳೀಯ ಯಂತ್ರಗಳ ಲಭ್ಯತೆ ಇರುವವರೆಗೆ ಹೊರ ರಾಜ್ಯ ಹಾಗೂ ಬೇರೆ ಜಿಲ್ಲೆಗಳ ಯಂತ್ರಗಳಿಗೆ ಅನುಮತಿ ಕೊಡಬಾರದು ಎಂದು ಒತ್ತಾಯಿಸಿದರು.
ಸ್ಥಳೀಯ ಕಬ್ಬು ಕಟಾವು ಯಂತ್ರಗಳಿಗೆ ಆದ್ಯತೆ ನೀಡುವಂತೆ ಆದೇಶ ಹೊರಡಿಸಿ, ಅದನ್ನು ಜಾರಿಗೆ ತರಬೇಕು ಎಂದು ಬೇಡಿಕೆ ಮಂಡಿಸಿದರು.
ಸಂಘದ ಕಲಬುರಗಿ ಜಿಲ್ಲಾ ಗೌರವಾಧ್ಯಕ್ಷ ಭೀಮಾಶಂಕರ ಎಸ್. ಪಾಟೀಲ, ಅಧ್ಯಕ್ಷ ಶಾಂತಗೌಡ ಕೆ. ಪಾಟೀಲ, ಕಾರ್ಯದರ್ಶಿ ಬಾಬಾಗೌಡ ಎಸ್. ಬಿರಾದಾರ, ಬೀದರ್ ಜಿಲ್ಲಾ ಅಧ್ಯಕ್ಷ ಅನಿಲಕುಮಾರ ಪನ್ನಾಳೆ, ರಾಜುರೆಡ್ಡಿ ಶೇರಿಕಾರ್ ಬನ್ನಳ್ಳಿ, ನಾಗೇಶ್ ಬೆಳಕೇರೆ, ಸೂರ್ಯಕಾಂತ ವಗದಾಳ್, ಸಂಕೇತ್ ಸಜ್ಜನ್, ಮುಷ್ತಾಕ್ ರಾಜೇಶ್ವರ, ಬಸವರಾಜ ಹಲಬರ್ಗಾ, ನಾಗ ರೆಡ್ಡಿ ಉಡಬಾಳ್ ಮತ್ತಿತರರು ಇದ್ದರು.






























