Home ಮುಖಪುಟ ಸುದ್ದಿ ನ. ೯ರಿಂದ ೧೩೭ ಕ್ಯಾನ್ಸರ್ ಔಷಧಗಳ ಬೆಲೆ ಶೇ. ೭೦ರಷ್ಟು ಇಳಿಕೆ

ನ. ೯ರಿಂದ ೧೩೭ ಕ್ಯಾನ್ಸರ್ ಔಷಧಗಳ ಬೆಲೆ ಶೇ. ೭೦ರಷ್ಟು ಇಳಿಕೆ

ನವದೆಹಲಿ, ಅ.೧೮: ಕ್ಯಾನ್ಸರ್ ರೋಗಿಗಳಿಗೆ ಸಮಾಧಾನಕರ ಸುದ್ದಿಯೊಂದು ಲಭಿಸಿದೆ. ನವೆಂಬರ್ ೯ರಿಂದ ೧೩೭ ಕ್ಯಾನ್ಸರ್ ಔಷಧಗಳ ಬೆಲೆ ಗರಿಷ್ಠ ಶೇ. ೭೦ರಷ್ಟು ಇಳಿಕೆಯಾಗಲಿದೆ. ಔಷಧಗಳ ವ್ಯಾಪಾರ ಲಾಭದ ಪ್ರಮಾಣವನ್ನು ಶೇ. ೩೦ಕ್ಕೆ ಸೀಮಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.


ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವಾದ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು, ವ್ಯಾಪಾರ ಲಾಭದ ಅತಿಯಾದ ಪ್ರಮಾಣವನ್ನು ನಿಯಂತ್ರಿಸುವ ಉದ್ದೇಶದಿಂದ, ೨೦೧೩ರ ಔಷಧ ಬೆಲೆ ನಿಯಂತ್ರಣ ಆದೇಶದ ೧೯ನೇ ಪರಿಚ್ಛೇದದಡಿ ೧೩೭ ಕ್ಯಾನ್ಸರ್ ಔಷಧಗಳ ಬೆಲೆ ಪರಿಷ್ಕರಣೆಗೆ ಅಧಿಸೂಚನೆ ಹೊರಡಿಸಿದೆ. ಈ ಪಟ್ಟಿಯಲ್ಲಿ ಪೇಟೆಂಟ್ ಹೊಂದಿರುವ ಔಷಧಗಳೂ ಸೇರಿವೆ.


ಸರಕು ಮತ್ತು ಸೇವಾ ತೆರಿಗೆಯನ್ನು ಹೊರತುಪಡಿಸಿ, ಔಷಧಗಳ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಯಲ್ಲಿ ವ್ಯಾಪಾರ ಲಾಭವನ್ನು ಶೇ. ೩೦ಕ್ಕೆ ಸೀಮಿತಗೊಳಿಸಲಾಗಿದೆ. ಇದು ಸಗಟು ವಿತರಕರಿಗೆ ಔಷಧ ಮಾರಾಟ ಮಾಡುವ ಬೆಲೆಯ ಮೇಲೆ ಶೇ. ೪೨.೯ರಷ್ಟು ಲಾಭದ ಮಿತಿಗೆ ಸಮನಾಗಿದೆ ಎಂದು ಪ್ರಾಧಿಕಾರದ ಸಭೆಯ ನಡಾವಳಿಗಳು ತಿಳಿಸಿವೆ.
ಔಷಧಗಳ ವಿತರಣಾ ಬೆಲೆ ಮತ್ತು ರೋಗಿಗಳಿಗೆ ವಿಧಿಸಲಾಗುವ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಯ ನಡುವೆ ಕೆಲವು ಪ್ರಕರಣಗಳಲ್ಲಿ ಹತ್ತು ಪಟ್ಟು ವ್ಯತ್ಯಾಸವಿರುವುದನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.


ಪರ್ಟುಜುಮಾಬ್ ಮತ್ತು ಟ್ರಾಸ್ಟುಜುಮಾಬ್, ಅಟೆಝೋಲಿಝುಮಾಬ್, ಟೆಕ್ಲಿಸ್ಟಮಾಬ್, ಇನೊಟುಝುಮಾಬ್ ಓಝೊಗಾಮಿಸಿನ್ ಹಾಗೂ ಡರಾಟುಮಾಬ್ ಸೇರಿದಂತೆ ಕೆಲವು ಔಷಧಗಳ ಒಂದು ಸೀಸೆ ಅಥವಾ ಪ್ಯಾಕ್‌ನ ಬೆಲೆ ೫ ಲಕ್ಷ ರೂಪಾಯಿವರೆಗೂ ಇದೆ.


ಅಧಿಸೂಚನೆ ಪ್ರಕಟವಾದ ಏಳು ದಿನಗಳೊಳಗೆ ಪರಿಷ್ಕೃತ ಬೆಲೆಗಳ ವಿವರವನ್ನು ತಯಾರಕರು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಅಲ್ಲದೆ, ತಮ್ಮ ಜಾಲತಾಣಗಳಲ್ಲಿ ಪರಿಷ್ಕೃತ ಬೆಲೆಪಟ್ಟಿಯನ್ನು ಪ್ರಕಟಿಸಿ, ಔಷಧ ಮಾರಾಟಗಾರರು ಮತ್ತು ಆಸ್ಪತ್ರೆಗಳಿಗೆ ಅದರ ಮಾಹಿತಿ ನೀಡಬೇಕು. ಆಸ್ಪತ್ರೆಗಳೂ ತಮ್ಮ ಜಾಲತಾಣಗಳಲ್ಲಿ ಪರಿಷ್ಕೃತ ಬೆಲೆಗಳನ್ನು ಪ್ರಮುಖವಾಗಿ ಪ್ರದರ್ಶಿಸಬೇಕು.


ಪರಿಷ್ಕೃತ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಯನ್ನು ಲೆಕ್ಕಹಾಕಲು ೨೦೨೬ರ ಮಾರ್ಚ್ ತಿಂಗಳ ವಿತರಣಾ ಬೆಲೆಯನ್ನು ಆಧಾರವಾಗಿ ಪರಿಗಣಿಸಲು ಪ್ರಾಧಿಕಾರ ಅನುಮೋದನೆ ನೀಡಿದೆ.


ಉಚಿತವಾಗಿ ಔಷಧಗಳನ್ನು ಒದಗಿಸುವ ರೋಗಿ ನೆರವು ಕಾರ್ಯಕ್ರಮಗಳಡಿ ವಿತರಿಸಲಾದ ಔಷಧಗಳ ಪ್ರಮಾಣವನ್ನು ವ್ಯಾಪಾರ ಲಾಭದ ಮಿತಿ ಲೆಕ್ಕಾಚಾರದಿಂದ ಹೊರಗಿಡಬಹುದು ಎಂದು ಪ್ರಾಧಿಕಾರ ತಿಳಿಸಿದೆ.