Home ಮುಖಪುಟ ಸುದ್ದಿ ಮೈಸೂರು ಅರಮನೆ ಮುಂಭಾಗ ಜಂಬೂ ಸವಾರಿ ತಾಲೀಮು

ಮೈಸೂರು ಅರಮನೆ ಮುಂಭಾಗ ಜಂಬೂ ಸವಾರಿ ತಾಲೀಮು

ಮೈಸೂರು,ಅ.೧೮- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿಯಂದು ನಡೆಯಲಿರುವ ಜಂಬೂ ಸವಾರಿ ಮೆರವಣಿಗೆಗೆ ಸಿದ್ಧತೆಗಳು ಚುರುಕುಗೊಂಡಿದ್ದು, ಅರಮನೆ ಮುಂಭಾಗದಲ್ಲಿ ಇಂದು ಜಂಬೂ ಸವಾರಿ ತಾಲೀಮು ನಡೆಸಲಾಯಿತು.

ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ನೇತೃತ್ವದಲ್ಲಿ ನಡೆದ ತಾಲೀಮಿನಲ್ಲಿ ಮೆರವಣಿಗೆಯ ವ್ಯವಸ್ಥೆ, ಪೊಲೀಸ್ ತುಕಡಿಗಳ ಚಲನವಲನ ಹಾಗೂ ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಲಾಯಿತು. ವಿಜಯದಶಮಿಯಂದು ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗುವ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮಾದರಿಯಲ್ಲಿಯೇ ತಾಲೀಮು ನಡೆಸಲಾಯಿತು.

ಜಂಬೂ ಸವಾರಿ ತಾಲೀಮಿನಲ್ಲಿ ನಿಶಾನೆ ಆನೆಯಾಗಿ ಅಭಿಮನ್ಯು, ನೌಫತ್ ಆನೆಯಾಗಿ ಗೋಪಿ ಹಾಗೂ ಸಾಲಾನೆಗಳಾಗಿ ಮಹೇಂದ್ರ, ಶ್ರೀರಾಮ ಮತ್ತು ಶ್ರೀಕಂಠ ಪಾಲ್ಗೊಂಡವು. ಇವುಗಳ ಹಿಂದೆ ಚೈತ್ರಾ, ಲಕ್ಷ್ಮಿ, ಸುಗ್ರೀವ ಹಾಗೂ ಏಕಲವ್ಯ ಆನೆಗಳು ಸಾಗಿದವು. ಕೊನೆಯಲ್ಲಿ ಅಂಬಾರಿ ಆನೆ ಪ್ರಶಾಂತ ಹಾಗೂ ಕುಮ್ಕಿ ಆನೆಗಳಾದ ಕಾವೇರಿ ಮತ್ತು ರೂಪಾ ಪಾಲ್ಗೊಂಡವು.

ದಸರಾ ಆನೆಗಳಾದ ಮಹೇಂದ್ರ, ಶ್ರೀರಾಮ, ಶ್ರೀಕಂಠ, ಕಾವೇರಿ, ಅಭಿಮನ್ಯು, ಗೋಪಿ, ಚೈತ್ರಾ, ಲಕ್ಷ್ಮಿ, ಸುಗ್ರೀವ, ಏಕಲವ್ಯ, ರೂಪಾ ಹಾಗೂ ಪ್ರಶಾಂತ ತಾಲೀಮಿನಲ್ಲಿ ಭಾಗವಹಿಸಿ ಮೆರವಣಿಗೆಯ ಕ್ರಮಬದ್ಧತೆಯನ್ನು ಅಭ್ಯಾಸ ಮಾಡಿದವು.

ಜಂಬೂ ಸವಾರಿ ಮೆರವಣಿಗೆಯ ಅಂಗವಾಗಿ ಪೊಲೀಸ್ ವಾದ್ಯವೃಂದ ಹಾಗೂ ಅಶ್ವದಳದ ಸಿಬ್ಬಂದಿಯೂ ತಾಲೀಮಿನಲ್ಲಿ ಪಾಲ್ಗೊಂಡರು. ವಿಜಯದಶಮಿಯಂದು ಯಾವುದೇ ಲೋಪದೋಷಗಳಿಲ್ಲದೆ ಮೆರವಣಿಗೆ ನಡೆಸುವ ಉದ್ದೇಶದಿಂದ ಭದ್ರತಾ ವ್ಯವಸ್ಥೆ, ಮೆರವಣಿಗೆಯ ಕ್ರಮ ಹಾಗೂ ವಿವಿಧ ತಂಡಗಳ ಸಮನ್ವಯವನ್ನು ಪರಿಶೀಲಿಸಲಾಯಿತು.

ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿ ಸುಗಮವಾಗಿ ನಡೆಯುವಂತೆ ತಾಲೀಮು ಮೂಲಕ ಅಂತಿಮ ಹಂತದ ಸಿದ್ಧತೆಗಳಿಗೆ ಒತ್ತು ನೀಡಲಾಯಿತು.