
ಗ್ವಾಲಿಯರ್ನಲ್ಲಿ ಟ್ರಕ್ ಹರಿದು ಭೀಕರ ರಸ್ತೆ ಅಪಘಾತ ೨೭ಕ್ಕೂ ಹೆಚ್ಚು ಮಂದಿಗೆ ಗಾಯ
ಗ್ವಾಲಿಯರ್,ಅ.೧೮-ನಗರದ ಪ್ರಸಿದ್ಧ ಶೀತಲಾ ಮಾತಾ ದೇವಸ್ಥಾನದ ಬಳಿ ಭಕ್ತರ ಮೇಲೆ ಟ್ರಕ್ ಹರಿದು ಕನಿಷ್ಠ ೧೯ ಮಂದಿ ಮೃತಪಟ್ಟು. ೨೭ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ಇಂದು ಮುಂಜಾನೆ ನಡೆದಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಐದರಿಂದ ಆರು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಬತ್ತ ತುಂಬಿಕೊಂಡು ಛಿನೋರ್ ಕಡೆಯಿಂದ ಬರುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಭಕ್ತರ ಮೇಲೆ ಹರಿದಿದೆ. ಬಳಿಕ ಪೊಲೀಸ್ ಬ್ಯಾರಿಕೇಡ್ಗಳನ್ನು ಮುರಿದು ದೇವಸ್ಥಾನದ ಗೇಟ್ ಹಾಗೂ ಹೊರಗೋಡೆಗೆ ಡಿಕ್ಕಿ ಹೊಡೆದಿದೆ. ಬೆಳಗಿನ ಜಾವ ಸುಮಾರು ೧.೩೦ರ ವೇಳೆಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ ಒಟ್ಟು ೩೯ ಮಂದಿ ಗಾಯಗೊಂಡಿದ್ದರು. ಈ ಪೈಕಿ ೧೯ ಮಂದಿ ಮೃತಪಟ್ಟಿದ್ದು, ಉಳಿದ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಐದರಿಂದ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಕೆಲವರಿಗೆ ಮೂಳೆ ಮುರಿತವಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನಾ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದು, ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗ್ವಾಲಿಯರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಧರ್ಮವೀರ್ ಸಿಂಗ್ ತಿಳಿಸಿದ್ದಾರೆ.
ನಿಯಂತ್ರಣ ತಪ್ಪಿದ ಟ್ರಕ್:
ನವರಾತ್ರಿ ಹಿನ್ನೆಲೆಯಲ್ಲಿ ಶೀತಲಾ ಮಾತಾ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಪೊಲೀಸ್ ಬ್ಯಾರಿಕೇಡ್ಗಳು ಮತ್ತು ತಪಾಸಣಾ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಭಾರೀ ವಾಹನಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿತ್ತು.
ಆದರೆ, ಭತ್ತ ತುಂಬಿಕೊಂಡು ಬರುತ್ತಿದ್ದ ಟ್ರಕ್ ಕಡಿದಾದ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಭಕ್ತರಿದ್ದ ಕಡೆಗೆ ನುಗ್ಗಿದೆ. ಬಳಿಕ ಬ್ಯಾರಿಕೇಡ್ಗಳನ್ನು ಮುರಿದು ದೇವಸ್ಥಾನದ ಗೇಟ್ ಹಾಗೂ ಹೊರಗೋಡೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಯಲ್ಲಿದ್ದ ಜನರು ಮತ್ತು ಅಂಗಡಿಗಳಿಗೆ ಹಾನಿಯಾಗಿದೆ
ಟ್ರಕ್ ಪ್ರವೇಶಿಸಿದ್ದು ಹೇಗೆ:
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಆಂಬ್ಯುಲೆನ್ಸ್ಗಳು ಹಾಗೂ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ರವಾನಿಸಲಾಗಿತ್ತು. ತಕ್ಷಣದ ಪರಿಹಾರ ಕಾರ್ಯಾಚರಣೆಯಿಂದ ಹೆಚ್ಚಿನ ಸಾವು-ನೋವುಗಳನ್ನು ತಪ್ಪಿಸಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವರಾತ್ರಿ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬ್ಯಾರಿಕೇಡ್ಗಳು ಹಾಗೂ ಪೊಲೀಸ್ ತಪಾಸಣಾ ಕೇಂದ್ರವಿದ್ದರೂ ಟ್ರಕ್ ಅಲ್ಲಿಗೆ ಪ್ರವೇಶಿಸಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಗ್ವಾಲಿಯರ್ ಜಿಲ್ಲಾಧಿಕಾರಿ ರುಚಿಕಾ ಚೌಹಾಣ್ ತಿಳಿಸಿದ್ದಾರೆ.
ಟ್ರಕ್ನಲ್ಲಿ ತಾಂತ್ರಿಕ ದೋಷ:
ವಾಹನ ನಿಯಂತ್ರಣ ತಪ್ಪಲು ಕಾರಣವೇನು? ಟ್ರಕ್ ಎಡಕ್ಕೆ ತಿರುಗಿದ್ದು ಹೇಗೆ? ಎಂಬುದನ್ನು ಪತ್ತೆಹಚ್ಚಲು ಪ್ರಾದೇಶಿಕ ಸಾರಿಗೆ ಕಚೇರಿಯ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅಪಘಾತವನ್ನು ಕಣ್ಣಾರೆ ಕಂಡ ಗಾಯಾಳುವೊಬ್ಬರ ಸಹೋದರ ನೀಡಿರುವ ಮಾಹಿತಿಯ ಪ್ರಕಾರ, ಟ್ರಕ್ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಭತ್ತವನ್ನು ತುಂಬಲಾಗಿತ್ತು ಎನ್ನಲಾಗಿದೆ. ಟ್ರಕ್ ಏಕಾಏಕಿ ನಿಯಂತ್ರಣ ತಪ್ಪಿ ಜನರು ಮತ್ತು ಅಂಗಡಿಗಳ ಮೇಲೆ ಹರಿದಿದೆ ಎಂದು ಅವರು ತಿಳಿಸಿದ್ದಾರೆ.
ಘಟನೆಗೆ ನಿಖರ ಕಾರಣವೇನು ಎಂಬುದು ತನಿಖೆಯ ಬಳಿಕ ತಿಳಿದುಬರಬೇಕಿದ್ದು,ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ಕೈಗೊಳ್ಳಲಾಗಿದೆ.























