Home ಜಿಲ್ಲೆ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ವ್ಹಿ.ಎನ್. ಜಾಲಿಹಾಳ

ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ವ್ಹಿ.ಎನ್. ಜಾಲಿಹಾಳ

ಜಮಖಂಡಿ | ಆ 2:ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ತಾವು ಕಲಿತ ಶಾಲೆಯ ಅಭಿವೃದ್ಧಿ ಹಾಗೂ ಇಲ್ಲಿನ ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯ ಹೆಚ್ಚಿಸಲು ಹಳೆಯ ವಿದ್ಯಾರ್ಥಿಗಳು ತಮ್ಮಿಂದಾದಷ್ಟು ಸಹಾಯ-ಸಹಕಾರ ನೀಡಬೇಕು ಎಂದು ನಿವೃತ್ತ ಮುಖ್ಯಾಧ್ಯಾಪಕ ವ್ಹಿ.ಎನ್. ಜಾಲಿಹಾಳ ಕರೆ ನೀಡಿದರು.

ನಗರದ ಸರಕಾರಿ ಬನಶಂಕರಿ ಹೆಣ್ಣು ಮಕ್ಕಳ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ನಾಲ್ಕು ಬ್ಯಾಚ್‍ಗಳ ಹಳೆಯ ವಿದ್ಯಾರ್ಥಿನಿಯರ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಸುಮಾರು ಎರಡು ದಶಕಗಳ ಹಿಂದೆ ಇದೇ ಶಾಲೆಯಲ್ಲಿ 800ಕ್ಕೂ ಅಧಿಕ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿ. ಶಾಲೆಗಳಲ್ಲಿ ಮತ್ತೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘಟನೆಗಳು ಶಾಲೆಗೆ ಪೂರಕವಾದ ಚಟುವಟಿಕೆಗಳನ್ನು ಕೈಗೊಂಡು ನೆರವಾಗಬೇಕು” ಎಂದು ಹೇಳಿದರು.

ಹಳೆಯ ವಿದ್ಯಾರ್ಥಿನಿಯರಾದ ತನುಜಾ ಚೌಧರಿ, ಕವಿತಾ ಲಕ್ಷೆಟ್ಟಿ ಹಾಗೂ ಮಹಾದೇವಿ ಶಿವಶಿಂಪಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, “ಅಂದು ಗುರುಗಳು ನಮಗೆ ನೀಡಿದ ಶಿಕ್ಷಣ ಹಾಗೂ ಸಂಸ್ಕಾರ ಇಂದು ನಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಲು ಮಾರ್ಗದರ್ಶಿಯಾಗಿದೆ. ಪಾಟೀಲ ಗುರುಮಾತೆ ನಮ್ಮೆಲ್ಲರ ಅಚ್ಚುಮೆಚ್ಚಿನ ಗುರುವಾಗಿದ್ದರು. ಅವರು ಹೇಳುತ್ತಿದ್ದ ಪ್ರತಿಯೊಂದು ಕಥೆ, ನೀಡುತ್ತಿದ್ದ ಮಾರ್ಗದರ್ಶನ ಇಂದು ನಮ್ಮ ಜೀವನದ ದಾರಿಗೆ ದಾರಿದೀಪವಾಗಿದೆ. ಇಂದು ಅವರು ನಮ್ಮೊಂದಿಗಿಲ್ಲದಿದ್ದರೂ, ಅವರ ಪ್ರತಿನಿಧಿಯಾಗಿ ನಮಗೆಲ್ಲ ಮನೆಯ ಪಾಠ ಹೇಳಿಕೊಟ್ಟ ಅವರ ಪುತ್ರ ಗೋಪಾಲ ಸರ್ ನಮ್ಮೊಂದಿಗಿರುವುದು ಸಂತಸದ ಸಂಗತಿ” ಎಂದು ಸ್ಮರಿಸಿದರು.

ಚೆನ್ನಮ್ಮ ಸೊನ್ನದ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಾ ಲಕ್ಷೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಕ್ಕಳು ಪ್ರಾರ್ಥನೆ ಹಾಗೂ ಸ್ವಾಗತ ಗೀತೆ ಹಾಡಿದರು. ಮಹಾದೇವಿ ಶಿವಶಿಂಪಿ ಸ್ವಾಗತಿಸಿದರು.

ವೇದಿಕೆಯಲ್ಲಿ ಮುಖ್ಯೋಪಾಧ್ಯಾಯಿನಿ ಎ.ಆರ್. ಬಿದರಿ, ನಿವೃತ್ತ ಶಿಕ್ಷಕರಾದ ಎಸ್.ಬಿ. ಭೂಸಾನಿ, ಬಿ.ಕೆ. ಪತ್ತಾರ, ಪತ್ರಕರ್ತ ಗೋಪಾಲ ಪಾಟೀಲ, ಎಸ್‍ಡಿಎಂಸಿ ಅಧ್ಯಕ್ಷ ಚಂದ್ರಕಾಂತ ಪೂಜಾರಿ, ಖಾಜಾಮಿನ ಬಾಗವಾನ, ಶಿಕ್ಷಕರು, ಶಾಲಾ ಸುಧಾರಣಾ ಸಮಿತಿಯ ಉಪಾಧ್ಯಕ್ಷರು, ಸದಸ್ಯರು ಹಾಗೂ ಹಳೆಯ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.