Home ಜಿಲ್ಲೆ ಪ್ರೇಮಚಂದ್ ಸಾಹಿತ್ಯ ಸಮಾಜದ ಶೋಷಿತ, ಬಡ ಮತ್ತು ರೈತ ವರ್ಗದ ಬದುಕನ್ನು ನೈಜವಾಗಿ ಪ್ರತಿಬಿಂಬಿಸುತ್ತದೆ :...

ಪ್ರೇಮಚಂದ್ ಸಾಹಿತ್ಯ ಸಮಾಜದ ಶೋಷಿತ, ಬಡ ಮತ್ತು ರೈತ ವರ್ಗದ ಬದುಕನ್ನು ನೈಜವಾಗಿ ಪ್ರತಿಬಿಂಬಿಸುತ್ತದೆ : ಡಾ. ಮಲ್ಲಿಕಾರ್ಜುನ ಕನಕಟ್ಟೆ

ಬೀದರ: ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬೀದರದ ಹಿಂದಿ ವಿಭಾಗದ ವತಿಯಿಂದ ಹಿಂದಿ ಸಾಹಿತ್ಯದ ಮಹಾನ್ ಕಾದಂಬರಿಕಾರ ಹಾಗೂ ಕಥಾ ಸಾಮ್ರಾಟ ಮುನ್ಷಿ ಪ್ರೇಮಚಂದ್ ಅವರ ಜಯಂತಿಯನ್ನು ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಬಿ.ವಿ.ಬಿ ಶಾಲಾ ಕಾಲೇಜುಗಳ ಆವರಣದ ಸಂಚಾಲಕರಾದ ಡಾ. ರಜನೀಶ ವಾಲಿಯವರ ನಿರ್ದೇಶನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಬೀದರದ ಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಕನಕಟ್ಟೆ ಅವರು ಭಾಗವಹಿಸಿ, ಮುನ್ಷಿ ಪ್ರೇಮಚಂದ್ ಅವರ ಸಾಹಿತ್ಯವು ಸಮಾಜದ ಶೋಷಿತ, ಬಡ ಮತ್ತು ರೈತ ವರ್ಗದ ಬದುಕನ್ನು ನೈಜವಾಗಿ ಪ್ರತಿಬಿಂಬಿಸಿದ್ದು, ಇಂದಿನ ಯುವಜನತೆ ಅವರ ಕೃತಿಗಳನ್ನು ಓದಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ದೀಪಾ ರಾಗಾ ವಹಿಸಿ ಮಾತನಾಡಿ, ಪ್ರೇಮಚಂದ್ ಅವರ ಸಾಹಿತ್ಯವು ಭಾರತೀಯ ಸಮಾಜದ ಕನ್ನಡಿ ಆಗಿದ್ದು, ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು. ವಿದ್ಯಾರ್ಥಿಗಳು ಸಾಹಿತ್ಯದ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.

ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀ ಮಾರುತಿ ಭೀಮಣ್ಣ ಅವರು ಮುನ್ಷಿ ಪ್ರೇಮಚಂದ್ ಅವರ ಜೀವನ, ಸಾಹಿತ್ಯ ಸೇವೆ ಹಾಗೂ ಹಿಂದಿ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆಗಳ ಕುರಿತು ವಿವರವಾಗಿ ಉಪನ್ಯಾಸ ನೀಡಿದರು. ಉಪನ್ಯಾಸಕರಾದ ಶ್ರೀ ನೆಹರು ಪವಾರ ಅವರು ಪ್ರೇಮಚಂದ್ ಅವರ ಪ್ರಮುಖ ಕೃತಿಗಳು ಹಾಗೂ ಸಾಮಾಜಿಕ ಚಿಂತನೆಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾರ್ಜುನ ಕೋಟೆ ಮುಖ್ಯಸ್ಥರು, ರಸಾಯನಶಾಸ್ತ್ರ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಮುನ್ಷಿ ಪ್ರೇಮಚಂದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಿದರು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.