Home ಜಿಲ್ಲೆ ಕಲಬುರಗಿ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಸಮರ್ಪಕ ಅನುಷ್ಠಾನಕ್ಕೆ ತರಬೇತಿ ಅವಶ್ಯಕ

ಪ್ರಧಾನಮಂತ್ರಿ ಮಾತೃವಂದನಾ ಯೋಜನೆಸಮರ್ಪಕ ಅನುಷ್ಠಾನಕ್ಕೆ ತರಬೇತಿ ಅವಶ್ಯಕ

ಕಲಬುರಗಿ,ಜು.10-ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕ ಅನುಷ್ಠಾನಕ್ಕಾಗಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ಅವಶ್ಯಕವಾಗಿದ್ದು, ಎಲ್ಲಾ ಶಿಬಿರಾರ್ಥಿಗಳು ಈ ತರಬೇತಿಯ ಸದುಪಯೋಗಪಡೆದುಕೊಳ್ಳಬೇಕೆಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ರಾಜಕುಮಾರ ಹೇಳಿದರು.

    ಅವರು ಇತ್ತೀಚಿಗೆ ಕಲಬುರಗಿ ನಗರದ ಸರಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ  ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸಮರ್ಪಕ ಅನುಷ್ಟಾನಕ್ಕಾಗಿ  ಹಮ್ಮಿಕೊಳ್ಳಲಾದ ಒಂದು ದಿನದ ತರಬೇತಿ ಕಾರ್ಯಾಗಾರÀವನ್ನು ಉದ್ಘಾಟಸಿ ಮಾತನಾಡಿದರು.

     ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಮುರುಗೇಶ ಗುಣಾರಿ ಅವರು ಮಾತನಾಡಿ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಅನೇಕ ತಾಂತ್ರಿಕ ಸಮಸ್ಯೆಗಳಿದ್ದು, ತರಬೇತಿ ವೇಳೆಯಲ್ಲಿ ಶಿಬಿರಾರ್ಥಿಗಳು ಸಮಸ್ಯೆಗಳು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರು.

   ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ಅಧಿಕಾರಿ ಶಿವಶರಣಪ್ಪ ಮಾತನಾಡಿ, ರಾಜ್ಯ ಮಟ್ಟದಲ್ಲಿ ಜಿಲ್ಲೆಯಿಂದ ಆಯ್ದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾಸ್ಟರ್ ಟ್ರೇನರ್ಸ್ ಎಂದು ತರಬೇತಿ ನೀಡಲಾಗಿತ್ತು, ಈಗ ರಾಜ್ಯ ಮಟ್ಟದಿಂದ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲು ಬಂದಿರುವುದರಿಂದ ತರಬೇತಿಯು ಖಂಡಿತವಾಗಿ ಪರಿಣಾಮಕಾರಿಯಾಗಿದ್ದು, ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. 

     ಈ ಸಂದರ್ಭದಲ್ಲಿ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು, ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ಐಪಿಇ ಗ್ಲೋಬಲ್ ಸಂಸ್ಥೆಯ ಸ್ಟೇಟ್ ಪ್ರೋಗ್ರಾಮ್ ಮ್ಯಾನೇಜರ್ ಆಬೇದ ಅಹ್ಮದ್, ಪಿಎಮ್‍ಎಮ್‍ವಿವೈ ಸ್ಪೇಷಾಲಿಸ್ಟ್ ರಾಹುಲ್ ಮಹಾದೇವ, ಟ್ರೇನಿಂಗ್ ಆಂಡ್ ಕಮ್ಯೂನಿಕೇಷನ್ಸ್ ಎಕ್ಸ್‍ಪರ್ಟ್ ಅಡಿವೆಪ್ಪಗೌಡ ಹಾದಿಮನಿ, ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಹಿರಿಯ ಮೇಲ್ವಿಚಾರಕಿಯರು, ವಲಯ ಮೇಲ್ವಿಚಾರಕಿಯರು, ತಾಲೂಕು ಪೋಷಣ ಸಂಯೋಜಕರು, ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಸಿಬ್ಬಂದಿಗಳು, ಚಿಗುರು ಯೋಜನೆಯ ಡಿಸ್ಟ್ರಿಕ್ಟ್ ಸಪೋರ್ಟ್ ಮ್ಯಾನೇಜರ್, 9 ಯೋಜನೆಗಳ ಇಂಪ್ಲಿಮೇಟಿಂಗ್ ಸಪೋರ್ಟಿಂಗ್ ಆಫೀಸರ್‍ಗಳು ಉಪಸ್ಥಿತರಿದ್ದರು. 

   ಜಿಲ್ಲಾ ಮಿಷನ್ ಸಂಯೋಜಕಿ ವಿಜಯಲಕ್ಷ್ಮಿ ಮೇಳಕುಂದಿ ಕಾರ್ಯಕ್ರಮ ನಿರೂಪಿಸಿದರು. ಪ್ರಾರಂಭದಲ್ಲಿ ಯಲ್ಲಪ್ಪ ಸ್ವಾಗತಿಸಿದರು. ಕೊನೆಯಲ್ಲಿ ಮಹಬೂಬ ಕುಕನೂರ ವಂದಿಸಿದರು.