
ಬೀದರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಬೀದರ ಜಿಲ್ಲಾ ಘಟಕದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರು ಸ್ಥಾಪಿಸಿದ್ದ ಐತಿಹಾಸಿಕ “ಮೂಕನಾಯಕ” ದಿನಪತ್ರಿಕೆಯ ಮರುಪ್ರಾರಂಭೋತ್ಸವ ಅಂಗವಾಗಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಮಂಗಳವಾರ ಧಮ್ಮದರ್ಶನ ಭೂಮಿ ವೈಶಾಲಿ ನಗರ ಆಣದೂರದಲ್ಲಿ ಆಯೋಜಿಸಲಾಯಿತು.
ಡಾ. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಮೂಕನಾಯಕ ದಿನಪತ್ರಿಕೆ ಮಹತ್ವದ ಪಾತ್ರ ವಹಿಸಿತ್ತು. ಇದೀಗ ದಿನಪತ್ರಿಕೆಯ ಮರುಪ್ರಾರಂಭವು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಸಂವಿಧಾನಿಕ ಮೌಲ್ಯಗಳ ಪ್ರಸಾರಕ್ಕೆ ಹೊಸ ಶಕ್ತಿ ತುಂಬಲಿದೆ
ಮೂಕನಾಯಕ ದಿನಪತ್ರಿಕೆಯ ಅಧಿಕೃತ ಬಿಡುಗಡೆ ಸಮಾರಂಭವು ಜೂನ್ ೯, ೨೦೨೬ರಂದು ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಬೆಳಗ್ಗೆ ೧೧.೩೦ ಗಂಟೆಗೆ ನಡೆಯಲಿದ್ದು, ಬೃಹತ್ ಸಂಖ್ಯೆಯಲ್ಲಿ ಬುದ್ಧಿಜೀವಿಗಳು, ದಲಿತ ಪರ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ದಿನಪತ್ರಿಕೆಯನ್ನು ಬಿಡುಗಡೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಾರ್ವಜನಿಕರಿಗೆ ಕರೆ ನೀಡಲಾಯಿತು.
ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಂತೆ ಜ್ಞಾನಸಾಗರ ಥೇರೋ ಹಾಗೂ ಭಂತೆ ಸಂಘರಕ್ಷಿತ್ ದಿವ್ಯ ಅವರು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಸಂಚಾಲಕ ಸುನೀಲ್ ಸಂಗಮ್, ಬಾಬು ಆಣದೊರೆ, ಅಂಬಾದಾಸ್ ಸೋನಿ, ಪ್ರೇಮ್ ಕುಮಾರ್ ಸರಿಕಾರ್, ಅಂಕೋಶ್ ಬ್ಯಾಲಹಳ್ಳಿ, ವಿಜಯ್ ಸೋನಿ, ರಾಮದಾಸ್ ಸೋನಿ ಸೇರಿದಂತೆ ಹಲವು ದಲಿತ ಪರ ಹೋರಾಟಗಾರರು, ಬುದ್ಧಿಜೀವಿಗಳು ಹಾಗೂ ಸಮಾಜಮುಖಿ ಕಾರ್ಯಕರ್ತರು ಭಾಗವಹಿಸಿದ್ದರು.






























