
ಕಲಬುರಗಿ,ಮೇ.18-ಕೇಂದ್ರದ ಎನ್‍ಡಿಎ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‍ಗೆ 3 ರೂ. ಹೆಚ್ಚಿಸಿರುವುದು ಈಗಾಗಲೇ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಮತ್ತೊಂದು ಹೊರೆ ಹಾಕಿದಂತಾಗಿದೆ ಎಂದು ಸಮಾಜ ಸೇವಕ ಡಾ.ಫಾರುಕ್ ಮಣ್ಣೂರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೋರಡಿಸಿದ ಅವರು, ಪಂಚರಾಜ್ಯ ಚುನಾವಣೆಯ ಬಳಿಕ ಕೇಂದ್ರ ಸರ್ಕಾರ ವಾಣಿಜ್ಯ ಅಡುಗೆ ಅನಿಲ ದರ ಹೆಚ್ಚಿಸಿದ್ದು, ಚಿನ್ನದ ಮೇಲಿನ ಆಮದು ಸುಂಕ ಏರಿಸಿದ್ದು, ಇದೀಗ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸುವ ಮೂಲಕ ಜನವಿರೋಧಿ ನೀತಿಯನ್ನು ಮುಂದುವರಿಸಿದೆ ಎಂದು ಟೀಕಿಸಿದರು.
ಕಳೆದ 12 ವರ್ಷಗಳಿಂದ ಬಿಜೆಪಿ ನೇತೃತ್ವದ ಸರ್ಕಾರ ರೈತರ ಆದಾಯ .ದ್ವಿಗುಣಗೊಳಿಸುವುದು, ಯುವಕರಿಗೆ ಉದ್ಯೋಗ ನೀಡುವುದು, ಇಂಧನ ದರ ಇಳಿಸುವುದು ಸೇರಿದಂತೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಹೇಳಿದರು.
“ಬೆಲೆ ಏರಿಕೆ ನಿಯಂತ್ರಿಸುವ ಬದಲು ಜನರಿಗೆ ಕಡಿಮೆ ಪೆಟ್ರೋಲ್ ಬಳಸಿ, ಚಿನ್ನ ಖರೀದಿಸಬೇಡಿ ಎಂಬ ಉಚಿತ ಸಲಹೆ ನೀಡಲಾಗುತ್ತಿದೆ. ಬಡವರಿಗಾಗಿ ನೀಡುತ್ತಿದ್ದ ಅಡುಗೆ ಅನಿಲ ಸಬ್ಸಿಡಿಯನ್ನೂ ಸ್ಥಗಿತಗೊಳಿಸಲಾಗಿದೆ. ಇದು ಜನರಿಗೆ ಮಾಡಿದ ದ್ರೋಹ,” ಎಂದು ಡಾ.ಫಾರುಕ್ ಮಣ್ಣೂರ ಹೇಳಿದರು.
ದೇಶದ ಜನರಿಗೆ ನಿಜವಾದ ಪರಿಹಾರ, ಉದ್ಯೋಗ ಸೃಷ್ಟಿ ಮತ್ತು ಬೆಲೆ ಏರಿಕೆ ನಿಯಂತ್ರಣ ಅಗತ್ಯವಿದ್ದು, ಸುಳ್ಳು ಭರವಸೆಗಳು ಮತ್ತು ಪ್ರಚಾರ ರಾಜಕಾರಣದಿಂದ ಜನರ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂದು ಅವರು ಹೇಳಿದರು.




















