
ಕಲಬುರಗಿ,ಆ.22-ಕಲಬುರಗಿಯಲ್ಲಿ ಅಭಿವೃದ್ದಿ ಕಾಮಗಾರಿಗಳು ಸಂಪೂರ್ಣ ವಿಫಲವಾಗಿದ್ದು, ನಗರದಲ್ಲಿ ಹದಗೆಟ್ಟು ಹೋದ ರಸ್ತೆಯಲ್ಲಿ ಗುಂಡಿಗಳ ಆರ್ಭಟ ಮತ್ತು ಜಿಲ್ಲಾಡಳಿತದ ಕಾರ್ಯವೈಖರಿ, ಹಾಳಾದ ರಿಂಗ್‍ರಸ್ತೆ, ಸುಪರ್ ಮಾರ್ಕೆಟ್‍ನಲ್ಲಿ ಜನ ಸಂಚರಿಸದಂತಹ ವಾತಾವರಣ ನಿರ್ಮಾಣವಾಗಿರುವುದರ ಬಗ್ಗೆ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ ಅವರು ಡಿಸಿ ಕಚೇರಿ ಮುಂದೆ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಮಾತನಾಡುತ್ತಾ ಆಡಳಿತದಲ್ಲಿರುವ ಪ್ರತಿನಿಧಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ನಾಯಕರಿಂದ ವೈಯಕ್ತಿಕ ನಿಂದನೆ ಮಾಡುವುದು ಎಷ್ಟು ಸರಿ ಎಂದು ಬಿಜೆಪಿ ನಗರ ಓಬಿಸಿ ಘಟಕದ ಅಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಕೇಳದೆ ಮತ್ಯಾರಿಗೆ ಕೇಳಬೇಕು, ಸಮಸ್ಯೆಗಳ ಕುರಿತು ವಿರೋಧ ಪಕ್ಷದಲ್ಲಿದ್ದವರು ಪ್ರಶ್ನೆ ಕೇಳಬಾರದೆಂದರೆ ಅಧಿಕಾರಬಿಟ್ಟು ಮನೆಯಲ್ಲಿ ಕೂಡಿಸಿ ಎಂದು ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣವಾಗಿ ಹಾಳಾಗಿ ಹೋಗಿದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ, ನಗರ ಸೇರಿದಂತೆ ಜಿಲ್ಲೆಯಲ್ಲಿ ಕೊಲೆ, ಸುಲಿಗೆ, ಸರ-ಮನೆಗಳ್ಳತನ, ಅಕ್ರಮ ಗಾಂಜಾ ಮಾರಾಟ, ಮಟಕಾ ದಂಧೆ, ಅಕ್ರಮ ಮರಳು ಸಾಗಾಟಾ ಸೇರಿದಂತೆ ಅನೇಕ ದುರಾಕ್ರಮಗಳಿಗೆ ಕಡಿವಾಣ ಹಾಕಬೇಕೇದಾವರು ಯಾರು ? ವಿರೋಧ ಪಕ್ಷದವರಾ ಅಥವಾ ಸರಕಾರದಲ್ಲಿರುವವರಾ ಎಂದು ಕೈ ಮುಖಂಡರು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿ ಅಭಿವೃದ್ದಿ ಕಾಮಗಾರಿಗಳ ಬಗ್ಗೆ, ಉದ್ಯೋಗ, ಕುಡಿಯುವ ನೀರಿನ ಸೌಲಭ್ಯ, ರಸ್ತೆ ಸುರಕ್ಷತೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಬಗ್ಗೆ ಪರಿಹಾರ ಕೇಳಿದರೆ ವಿಪಕ್ಷದ ನಾಯಕರಿಗೆ ವೈಯಕ್ತಿಕ ನಿಂದನೆ ಮಾಡಿ ಪ್ರಕರಣ ದಾಖಲಿಸಿ ಹೆದರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.































