
ವಿಜಯಪುರ, ಜೂ. 27: ಮಳೆಗಾಲದಲ್ಲಿ ವಿಜಯಪುರ ನಗರದಲ್ಲಿ ಪ್ರವಾಹ ಉಂಟಾಗದಂತೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಅಗತ್ಯವಿರುವ ಎಲ್ಲ ಅನುದಾನವನ್ನು ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.
ನಗರದ ವಿವಿಧೆಡೆ ನಡೆಯುತ್ತಿರುವ ಪ್ರವಾಹ ತಡೆ ಕಾಮಗಾರಿಗಳನ್ನು ಶುಕ್ರವಾರ ಪರಿಶೀಲಿಸಿದ ಸಚಿವರು, ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ನಗರದ ಹಲವು ಪ್ರದೇಶಗಳಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ಸಂಕಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸಮಗ್ರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಗರದ ಐತಿಹಾಸಿಕ ಕೋಟೆ ಗೋಡೆ ಸುತ್ತಲಿನ ಕಂದಕಗಳಲ್ಲಿ ಹೂಳು ತೆಗೆಯುವ ಹಾಗೂ ಪಿಚಿಂಗ್ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ಶಿವಾಜಿ ವೃತ್ತದ ಕಂದಕ, ಮನ್ನತ್ ಹಾಲ್ ಸಮೀಪ, ನವಭಾಗ್ ರಸ್ತೆ ಹಾಗೂ ಕಸ್ತೂರಿ ಕಾಲೋನಿ ಸೇರಿದಂತೆ ವಿವಿಧ ಪ್ರದೇಶಗಳ ಕಾಮಗಾರಿಗಳ ಪ್ರಗತಿಯನ್ನು ವೀಕ್ಷಿಸಿದರು.
ಸದ್ಯದವರೆಗೆ ಪ್ರವಾಹ ತಡೆ ಕಾಮಗಾರಿಗಳಿಗೆ ಸುಮಾರು ?6 ಕೋಟಿ ವೆಚ್ಚ ಮಾಡಲಾಗಿದೆ. ಕೆಲವು ಯೋಜನೆಗಳಲ್ಲಿ ಬದಲಾವಣೆ ಮಾಡಿ ಅನುದಾನ ಹೊಂದಾಣಿಕೆ ಮಾಡಲಾಗಿದ್ದು, ಅಗತ್ಯವಿದ್ದರೆ ತಮ್ಮ ಬಬಲೇಶ್ವರ ಕ್ಷೇತ್ರದ ಕೆಲವು ಕಾಮಗಾರಿಗಳ ಅನುದಾನವನ್ನು ಕೂಡ ನಗರ ಪ್ರವಾಹ ತಡೆಗೆ ಬಳಸಲಾಗುವುದು ಎಂದು ಸಚಿವರು ತಿಳಿಸಿದರು.
ಇದರ ಜೊತೆಗೆ, ಅಗತ್ಯವಿದ್ದರೆ ಸಿಎಸ್‍ಆರ್ (ಅSಖ) ಅನುದಾನವನ್ನೂ ಬಳಸಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಎಷ್ಟೇ ಪ್ರಮಾಣದಲ್ಲಿ ಮಳೆಯಾದರೂ ನಗರದಲ್ಲಿ ಪ್ರವಾಹ ಉಂಟಾಗದಂತೆ ಕಂದಕಗಳ ಅಭಿವೃದ್ಧಿ, ಕಾಲುವೆಗಳ ಹೂಳು ತೆರವು ಹಾಗೂ ಇತರೆ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ನಗರದ ರಸ್ತೆ ಅಭಿವೃದ್ಧಿಗೂ ?150 ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ರಸ್ತೆ ಕಾಮಗಾರಿಗಳೂ ಆರಂಭವಾಗಲಿವೆ ಎಂದು ಸಚಿವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ. ಆನಂದ, ಪಾಲಿಕೆ ಆಯುಕ್ತ ವಿಜಯಕುಮಾರ್, ಮೇಯರ್ ಕರಡಿ ಸೇರಿದಂತೆ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರವಾಹ ತಡೆಗೆ ಕೈಗೊಳ್ಳುತ್ತಿರುವ ಕಾಮಗಾರಿಗಳಿಗೆ ಸ್ಥಳೀಯ ಜನರು ಹಾಗೂ ಪಾಲಿಕೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.






























