ವಿಜಯಪುರ.ಆ.೩೧-ನಗರದ ೧೮ ನೇ ವಾರ್ಡಿನ ಮಹರ್ಷಿ ವಾಲ್ಮೀಕಿ ಉದ್ಯಾನವನದಲ್ಲಿ ಹುಣ್ಣಿಮೆಯ ಅಂಗವಾಗಿ ಡಾ. ಬಿ.ಆರ್.ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಮಹರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷ ಶ್ರೀರಾಮಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉದ್ಯಾನವನಗಳು ಕೇವಲ ವಿಹಾರ ತಾಣಗಳಲ್ಲ, ಅವು ಸಂಸ್ಕೃತಿಯ ಕೇಂದ್ರಗಳಾಗಬೇಕು.ಹುಣ್ಣಿಮೆಯಂತಹ ಶುಭ ಸಂದರ್ಭದಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸಾಮರಸ್ಯ ಮತ್ತು ಸಾಹಿತ್ಯಾಭಿರುಚಿಯನ್ನು ಬೆಳೆಸುತ್ತವೆ ಎಂದು ಹೇಳಿದರು.
ಡಾ. ಬಿ.ಆರ್.ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಕಲಾವಿದ ಮಂಡಿಬೆಲೆ ವೆಂಕಟೇಶ್ ಮಾತನಾಡಿ,ಇಂದಿನ ಡಿಜಿಟಲ್ ಯುಗದಲ್ಲಿ ಪಾಶ್ಚಾತ್ಯ ಸಂಗೀತದ ಅಬ್ಬರದ ನಡುವೆ ನಮ್ಮ ನಾಡಿನ ಸುಗಮ ಸಂಗೀತ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬೆಳೆಯುತ್ತಿರುವುದು ಹೆಮ್ಮೆಯ ವಿಷಯ.ಶಾಸ್ತ್ರೀಯ ಸಂಗೀತದ ಕಠಿಣ ನಿಯಮಗಳಿಗಿಂತ ಭಿನ್ನವಾಗಿ, ಸುಗಮ ಸಂಗೀತವು ಸಾಹಿತ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತದೆ. ಕವಿಯ ಭಾವವನ್ನು, ಪದದ ಅರ್ಥವನ್ನು ಹೃದಯಕ್ಕೆ ಮುಟ್ಟುವಂತೆ ಹಾಡುವುದೇ ಇದರ ಜೀವಾಳ ಎಂದರು.
ನಿವೃತ್ತ ಶಿಕ್ಷಕ ಕೆ.ಹೆಚ್.ಚಂದ್ರಶೇಖರ್ ಮಾತನಾಡಿ,ವಿಜಯಪುರದಂತಹ ಸಾಂಸ್ಕೃತಿಕ ನಗರದಲ್ಲಿ ವಾಲ್ಮೀಕಿ ಉದ್ಯಾನವನದಂತಹ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.ಇದು ಕೇವಲ ಒಂದು ಸಂಜೆಯ ಕಾರ್ಯಕ್ರಮವಾಗದೆ, ನಮ್ಮೊಳಗಿನ ಕನ್ನಡಾಭಿಮಾನವನ್ನು ಎಚ್ಚರಿಸುವ ಕೆಲಸ ಮಾಡಿದೆ ಎಂದರು.
ಕುವೆಂಪು, ದ.ರಾ. ಬೇಂದ್ರೆ, ಜಿ.ಎಸ್. ಶಿವರುದ್ರಪ್ಪ ಸೇರಿದಂತೆ ನಾಡಿನ ಹೆಸರಾಂತ ಕವಿಗಳ ಭಾವಗೀತೆಗಳು, ದಾಸರ ಪದಗಳು ಹಾಗೂ ಜಾನಪದ ಗೀತೆಗಳನ್ನು ಅವರು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದಾಗ ನೆರೆದಿದ್ದ ಸಂಗೀತ ಪ್ರೇಮಿಗಳು ಮಂತ್ರಮುಗ್ಧರಾದರು.
ಕಲಾವಿದರಾದ ಕಾಂತಮ್ಮ, ವೆಂಕಟಮ್ಮ, ಮಹರ್ಷ ವಾಲ್ಮೀಕಿ ಸಂಘದ ಖಜಾಂಚಿ ಪಾಂಡು, ನಾರಾಯಣಸ್ವಾಮಿ, ದೇವರಾಜ್, ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.
























