Home ಜಿಲ್ಲೆ ಅರುಣೋದಯ ಶಾಲೆಯಲ್ಲಿ ಪಾಲಕರ ಪಾದಪೂಜೆ

ಅರುಣೋದಯ ಶಾಲೆಯಲ್ಲಿ ಪಾಲಕರ ಪಾದಪೂಜೆ

ಬೀದರ್: ಗುರು ಪೂರ್ಣಿಮೆ ನಿಮಿತ್ತ ನಗರದ ಋಷಿಕೇಶ ಶಿಕ್ಷಣ ಸಂಸ್ಥೆಯ ಸಂಚಾಲಿತ ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲಕರ ಪಾದಪೂಜೆ ಮಾಡಿದರು.
ಪಾದ ತೊಳೆದು ಕುಂಕುಮ ಹಚ್ಚಿ, ಹೂಮಾಲೆ ಹಾಕಿ, ಆರತಿ ಬೆಳಗಿ, ಸಿಹಿ ತಿನ್ನಿಸಿದರು. ಗುರುಗಳಿಗೆ ವಂದನೆ ಸಲ್ಲಿಸಿದರು. ಶಾಲಾ ಆಡಳಿತ ಮಂಡಳಿಯವರು ಶಿಕ್ಷಕರಿಗೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು.
ಮಕ್ಕಳಿಂದ ಅವಿಭಕ್ತ ಹಾಗೂ ವಿಭಕ್ತ ಕುಟುಂಬ ಕುರಿತು ಹರಟೆ ಕಟ್ಟೆಯಲ್ಲಿ ಅರ್ಥಪೂರ್ಣ ಚರ್ಚೆ ನಡೆಯಿತು. ವಿದ್ಯಾರ್ಥಿಗಳು ತಮ್ಮ ತಮ್ಮ ವಾದಗಳನ್ನು ಮಂಡಿಸಿದರು.
ಉದ್ಘಾಟನೆ ನೆರವೇರಿಸಿದ ಕರ್ನಾಟಕ ಕೌನ್ಸಿಲ್ ಆಫ್ ಪ್ರೊಫೆಷನಲ್ ಸಿವಿಲ್ ಎಂಜಿನಿಯರ್ಸ್ ಸದಸ್ಯ ಹಾವಶೆಟ್ಟಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ, ಅಕ್ಷರ, ಬದುಕು ಹಾಗೂ ಮುಕ್ತಿಯ ಮಾರ್ಗ ತೋರುವವನೇ ಗುರು ಎಂದು ಹೇಳಿದರು.
ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತ ಸಹ ಕಾರ್ಯದರ್ಶಿ ಡಾ. ಪಲ್ಲವಿ ಪಾಟೀಲ ಮಾತನಾಡಿ, ಮಕ್ಕಳು ಜ್ಞಾನ ಕೊಟ್ಟ ಗುರುವನ್ನು ಜೀವನದಲ್ಲಿ ಎಂದೂ ಮರೆಯಬಾರದು ಎಂದರು.
ಋಷಿಕೇಶ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.
ಅಲ್ಕಾವತಿ ಹೊಸದೊಡ್ಡೆ ನಿರೂಪಿಸಿದರು. ನೀಲಮ್ಮ ಗಜಲೆ ಸ್ವಾಗತಿಸಿದರು. ಪ್ರಿಯಾಂಕ ಮಲ್ಕಾಪುರೆ ವಂದಿಸಿದರು.