
ಕಲಬುರಗಿ: ಸೂರ್ಯನಿಂದ ಹೊರಬರುವ ನೇರಳಾತೀತ ಕಿರಣಗಳಿಂದ ಭೂಮಿಯನ್ನು ರಕ್ಷಿಸುವ ಮೂಲಕ ಓಝೋನ ಪದರು ಸರ್ವ ಜೀವಿಗಳ
ರಕ್ಷಾಕವಚವಾಗಿದೆ. ಆದರೆ ಇದಕ್ಕೆ ರಂಧ್ರಗಳು ಉಂಟಾಗಿದ್ದು,ಇದರ ನೇರ ಪರಿಣಾಮ ಎಲ್ಲಾ ಜೀವರಾಶಿಗಳ ಮೇಲಾಗಲಿದೆ. ಆದ್ದರಿಂದ ಓಝೋನ್ ರಕ್ಷಣೆ ಮಾಡುವುದು ಅಗತ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ನಗರದ ಖಾದ್ರಿ ಚೌಕ್ ನಲ್ಲಿನ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಸಂಸ್ಥೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ
ಜರುಗಿದ ‘ವಿಶ್ವ ಓಜೋನ್ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಓಝೋನ್ ಪದರು ನಾಶವಾಗಿ ನೇರಳಾತೀತ ಕಿರಣಗಳು ಮಾನವನಿಗೆ ತಾಕಿದರೆ
ಚರ್ಮರೋಗ, ಕಣ್ಣಿನ ದೋಷ, ಗಂಟಲಿನಲ್ಲಿ ಕೆರೆತ, ಕ್ಯಾನ್ಸರ್, ರೋಗ ನಿರೋಧಕ ಶಕ್ತಿಯ ಕುಗ್ಗುವಿಕೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು, ದಟ್ಟವಾದ ಹೊಗೆ ಹೊರಹಾಕುವ
ವಾಹನಗಳ ಬಳಕೆಯನ್ನು ತಗ್ಗಿಸಬೇಕು. ಹಸಿರು ಮನೆ ಪರಿಣಾಮವನ್ನು ಕಡಿಮೆ
ಮಾಡುವುದು, ಎಲ್ಲೆಡೆ ವ್ಯಾಪಕವಾಗಿ ಗಿಡ-ಮರಗಳನ್ನು ಬೆಳೆಸಿ ಪರಿಸರದ ಸಮತೋಲನವನ್ನು ಕಾಪಾಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರಾವಿಪ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.




























