Home ಮುಖಪುಟ ಸುದ್ದಿ ಸಚಿವ ಸ್ಥಾನವಂಚಿತರಿಂದ ಆಕ್ರೋಶ ಸ್ಫೋಟ ; ಬೆಂಬಲಿಗರಿಂದ ಬೃಹತ್ ಪ್ರತಿಭಟನೆ

ಸಚಿವ ಸ್ಥಾನವಂಚಿತರಿಂದ ಆಕ್ರೋಶ ಸ್ಫೋಟ ; ಬೆಂಬಲಿಗರಿಂದ ಬೃಹತ್ ಪ್ರತಿಭಟನೆ

ಬೆಂಗಳೂರು,ಆ. ೪: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಎರಡನೇ ಹಂತದ ಸಂಪುಟ ವಿಸ್ತರಣೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ಅತೃಪ್ತ ಶಾಸಕರ ಆಕ್ರೋಶ ಸ್ಫೋಟಗೊಂಡಿದೆ.


ಸದ್ಯ ಸಚಿವ ಸ್ಥಾನ ಸಿಗದ ಹಿನ್ನೆಲೆ ಅಸಮಾಧಾನಗೊಂಡ ಶಾಸಕರು ಬೆಂಗಳೂರಿನಲ್ಲಿ ಸಭೆ ನಡೆಸಿದರೇ ಕೆಲವರು ರಾಜೀನಾಮೆಗೆ ಮುಂದಾಗಿದ್ದು,ಮುಂಬರುವ ದಿನಗಳಲ್ಲಿ ಈ ಬಿಸಿ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.


ಡಿಕೆ ಶಿವಕುಮಾರ್ ಸಂಪುಟದಲ್ಲಿ ದಿನೇಶ್ ಗುಂಡೂರಾವ್‌ಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಗಾಂಧಿನಗರ ಕಾರ್ಯಕರ್ತರು ಹಾಗೂ ನೂರಾರು ಅಭಿಮಾನಿಗಳು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಿದರು, ಪ್ರತಿಭಟನೆ ನಡೆಸಿದರು.


ಜಸ್ಟೀಸ್ ಫಾರ್ ಲಾಯಲ್ಟಿ ಬೋರ್ಡ್‌ನಿಂದ ಬಂದಿದ್ದ ಗಾಂಧಿನಗರ ಕಾರ್ಯಕರ್ತರು ಅವಕಾಶ ನೀಡದ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ದಿನೇಶ್ ಗುಂಡೂರಾವ್ ಅಭಿಮಾನಿಗಳು ಕಚೇರಿ ಮುಂದೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.ಈ ವೇಳೆ ಕೆಪಿಸಿಸಿ ಕಚೇರಿಗೆ ಕಾರ್ಯಕರ್ತರು ಮುತ್ತಿಗೆ ಹಾಕಿ ಬ್ಯಾರಿಕೇಡ್ ಹಾರಿ ಕಚೇರಿಗೆ ಕಾರ್ಯಕರ್ತರು ನುಗ್ಗಿದ ಪರಿಣಾಮ ನೂಕಾಟ, ತಳ್ಳಾಟ ನಡೆಯಿತು.


ನಾವು ಸಾಮೂಹಿಕ ರಾಜೀನಾಮೆ ಕೊಡುತ್ತೇವೆ. ಕೂಡಲೇ ಸಚಿವ ಸ್ಥಾನ ಘೋಷಣೆ ಮಾಡಿ, ಇಲ್ಲ ನಮ್ಮ ರಾಜೀನಾಮೆಯನ್ನು ಪಡೆಯಿರಿ. ಸಚಿವ ಸ್ಥಾನ ಕೊಡಲ್ಲ ಅಂತ ಮೊದಲೇ ಹೇಳಬೇಕಿತ್ತು. ಯಾವ ಕಪ್ಪು ಚುಕ್ಕೆ ಇದೆ. ಪಾರದರ್ಶಕ ಆಡಳಿತ ನೀಡಿದ್ರು ಅನ್ಯಾಯ ಯಾಕೆ? ಎಂದು ಘೋಷಣೆ ಕೂಗಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೆ,ಈ ಬಾರಿ ಒಂದೇ ಒಂದು ಸ್ಥಾನ ಬ್ರಾಹ್ಮಣ ಸಮುದಾಯಕ್ಕೆ ಕೊಟ್ಟಿಲ್ಲ. ಯಾರಾದ್ರು ಒಬ್ಬ ಶಾಸಕರಿಗಾದರೂ ಅವಕಾಶ ಕೊಡಬೇಕಿತ್ತು.

ಇದರಿಂದ ಸಮುದಾಯಕ್ಕೆ ಬೇಸರ ಆಗಿದೆ. ಇದೇ ಕಾರಣಕ್ಕೆ ಇಂದು ಕೆಪಿಸಿಸಿ ಕಚೇರಿಗೆ ನೂರಾರು ಸಂಖ್ಯೆಯಲ್ಲಿ ಮನವಿ ಸಲ್ಲಿಸಲು ಬಂದಿದ್ದೇವೆ.ಬೇಕೆ ಬೇಕು ನ್ಯಾಯ ಬೇಕು, ನಿಷ್ಠಾವಂತ ಕಾರ್ಯಕರ್ತರಿಗೆ ಗೌರವ ಕೊಡಿ ಅಂತ ಅರ್ಚಕರ ಸಂಘದವರೂ ಕೂಡ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.


ತಮಗೆ ಸಚಿವ ಸ್ಥಾನ ಸಿಗದ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಚಿವ ದಿನೇಶ್ ಗುಂಡೂರಾವ್ ನನಗೆ ಯಾಕೆ ಸಚಿವ ಸ್ಥಾನ ನೀಡಿಲ್ಲ ಎಂಬ ಬಗ್ಗೆ ಕಾರಣ ಹೇಳಬೇಕಿತ್ತು.ನಮ್ಮ ಕಾರ್ಯಕರ್ತರಿಗೆ ನೋವಾಗಿದೆ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.


ಮೊದಲ ಬಾರಿಗೆ ನಮ್ಮ ಸಮುದಾಯದವರು ಈ ಸಂಪುಟದಲ್ಲಿ ಇಲ್ಲ.ನನಗೆ ಯಾಕೆ ಸಚಿವ ಸ್ಥಾನ ನೀಡಿಲ್ಲ ಎಂಬ ಕಾರಣ ಹೇಳಬೇಕಿತ್ತು.ಅದು ಸ್ವಲ್ಪ ಬೇಜಾರಾಗಿದೆ.ನಾವೆಲ್ಲ ಪಕ್ಷದ ನಿಷ್ಠಾವಂತರು, ಪಕ್ಷದ ಕೆಲಸ ಮಾಡಿಕೊಂಡು ಬಂದವರು. ಇದೂವರೆಗೂ ಯಾವ ನಾಯಕರು ಭೇಟಿ ಮಾಡಿಲ್ಲ, ಮಾತನಾಡಿಲ್ಲ.ಕಾರ್ಯಕರ್ತರಿಗೆ ನೋವಾಗಿದೆ ಎಂದು ಹೇಳಿದರು.


ಸಚಿವ ಸಂಪುಟದಲ್ಲಿ ಸೇರುವುದು ಪಕ್ಷದ ಹೈಕಮಾಂಡ್ ತೀರ್ಮಾನವಾಗಿದೆ. ಹೊಸಬರಿಗೆ ಸಿಕ್ಕಿದೆ, ಆದರೆ ನನಗೆ ಯಾಕೆ ತಪ್ಪಿದೆಯೋ ಗೊತ್ತಿಲ್ಲ.ಈ ಹಿಂದೆ ನಾನೇ ಬಿಟ್ಟಿದ್ದೆ, ಮಂತ್ರಿ ಸ್ಥಾನ ಇಲ್ಲದೇ ಇರೋಕೆ ಆಗಲ್ಲ ಅಂತಲ್ಲ. ಯಾಕೆ ತೆಗೆದಿದ್ದಾರೆ ಅಂತ ಹೇಳಿಲ್ಲ ಎಂಬ ನೋವಿದೆ.ಇಲ್ಲಿಯವರೆಗೂ ಯಾರು ಕರೆ ಮಾಡಿಲ್ಲ,ಇದಕ್ಕೆ ಜಾತಿ ಒಂದೇ ಆಧಾರ ಅಲ್ಲ.ಅಲ್ಲದೆ, ಅತೃಪ್ತರ ಸಭೆಗೆ ನಾನು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.


ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಎಂ.ಕೃಷ್ಣಪ್ಪ ಅಭಿಮಾನಿಗಳು,ಬೆಂಬಲಿರಗರು, ಕಾರ್ಯಕರ್ತರು ಕೂಡ ಕೆಪಿಸಿಸಿ ಮುಂಭಾಗ ಜಮಾಯಿಸಿ ಧರಣಿ ನಡೆಸಿದರು.ಬ್ಲಾಕ್ ಅಧ್ಯಕ್ಷರು ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಸರಣಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಜೊತೆಗೆ ವಿಜಯನಗರ ಭಾಗದ ಬೆಂಬಲಿಗರು ನಾಗರಬಾವಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ ಬೆಂಬಲಿಗರು, ಟೋಲ್‌ಗೇಟ್ ಸರ್ಕಲ್‌ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಫೋಟೋ ದಹಿಸಿ ಆಕ್ರೋಶ ಹೊರಹಾಕಿದ್ದಾರೆ.


ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ವಿ. ಪಾಟೀಲ್, ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದು,ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ.


ಕೋಲಾರದ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿಗೆ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಬೆಂಬಲಿಗ ಹರೀಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವ ಸ್ಥಾನ ತಪ್ಪಿಸಿದ್ದಕ್ಕೆ ಕೆ.ಎಚ್. ಮುನಿಯಪ್ಪ ವಿರುದ್ಧವೂ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದು, ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


ಮಾಲೂರು ಶಾಸಕ ಕೆ.ವೈ. ನಂಜೇಗೌಡ ಕೂಡ ಸಚಿವ ಸ್ಥಾನ ಸಿಗದಿರುವುದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಮತ್ತೊಂದೆಡೆ, ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಕೂಡ ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಬೆಂಬಲಿಗರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ. ಬಿಜೆಪಿ ಕಡೆಯಿಂದ ಆಮಿಷ ಬಂದಿದ್ದರೂ ತಾನು ಪಕ್ಷ ತೊರೆದಿಲ್ಲ ಎಂದು ಹೇಳಿರುವ ಅವರು, ಕ್ಷೇತ್ರದ ಜನರು ರಾಜೀನಾಮೆ ನೀಡುವಂತೆ ಒತ್ತಾಯಿಸಿದರೆ ಆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.


ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಹಿರಿಯ ಶಾಸಕ ಡಿ.ಜಿ. ಶಾಂತನಗೌಡ ಕೂಡ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಅಸಮಾಧಾನಗೊಂಡಿದ್ದು,ಬೆಂಬಲಿಗರ ಸಭೆ ಕರೆದು ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.


ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪಗೆ ಸಚಿವ ಸ್ಥಾನ ನೀಡದಿರುವುದು ಅವರ ಬೆಂಬಲಿಗರಲ್ಲೂ ಅಸಮಾಧಾನ ಮೂಡಿಸಿದೆ.ಮಹದೇವಪ್ಪ ಪುತ್ರ ಹಾಗೂ ಸಂಸದ ಸುನಿಲ್ ಬೋಸ್‌ಗೆ ರಾಜೀನಾಮೆ ನೀಡುವಂತೆ ಬೆಂಬಲಿಗರು ಹಾಗೂ ಕಾರ್ಯಕರ್ತರು ಒತ್ತಾಯಿಸಿದ್ದಾರೆ.ಈ ಮೂಲಕ ಪಕ್ಷದೊಳಗಿನ ಅಸಮಾಧಾನ ಮತ್ತಷ್ಟು ಬಹಿರಂಗವಾಗಿದೆ.


ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲೂ ಶಾಸಕ ಅಶೋಕ ಪಟ್ಟಣಗೆ ಸಚಿವ ಸ್ಥಾನ ಸಿಗದಿರುವುದನ್ನು ಖಂಡಿಸಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಶಾಸಕ ನಾಡಗೌಡ ಬೆಂಬಲಿಗರು ಪ್ರತಿಭಟನೆ ನಡೆಸಿದರೆ, ಮುಧೋಳದಲ್ಲಿ ಶಾಸಕ ಆರ್.ಬಿ. ತಿಮ್ಮಾಪುರ ಬೆಂಬಲಿಗರು ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಚಿತ್ರದುರ್ಗದಲ್ಲೂ ಶಾಸಕ ಎನ್.ವೈ. ಗೋಪಾಲಕೃಷ್ಣಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.ರಾಂಪುರ ಬಸ್ ನಿಲ್ದಾಣ ಬಳಿ ಸಾರಿಗೆ ಬಸ್ ತಡೆದು ಟೈರಿಗೆ ಬೆಂಕಿಯಿಟ್ಟು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.ಜೊತೆಗೆ ವಿಷದ ಬಾಟಲಿ, ಪೆಟ್ರೋಲ್ ಪ್ರದರ್ಶಿಸಿ ಪ್ರತಿಭಟನಾಕಾರರು ಹೈಡ್ರಾಮಾ ನಡೆಸಿದರು.


ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿಗೆ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿವಿಜಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿರುವ ಬೆಂಬಲಿಗರು, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳಲ್ಲಿ ಬಂದ್ ನಡೆಸಲು ನಿರ್ಧರಿಸಿದ್ದಾರೆ.


ಇದೇ ವೇಳೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್, ತಿಪಟೂರು ಶಾಸಕ ಷಡಕ್ಷರಿ, ಗುಬ್ಬಿ ಶಾಸಕ ಶ್ರೀನಿವಾಸ್,ಶಿರಾ ಶಾಸಕ ಜಯಚಂದ್ರ. ಮುಧೋಳ ಶಾಸಕ ಆರ್.ಬಿ.ತಿಮ್ಮಾಪುರ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿ ಇನ್ನಷ್ಟು ಶಾಸಕರು ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.ಅಲ್ಲದೆ, ಅವರ ಅಭಿಮಾನಿಗಳು ಬೀದಿಗೀಳಿದು ಹೋರಾಟ ಆರಂಭಿಸಿದ್ದಾರೆ.ಜೊತೆಗೆ ಗುಬ್ಬಿ ಶಾಸಕ ಶ್ರೀನಿವಾಸ್ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ.


ಮಾಜಿ ಸಚಿವ ಎಚ್.ಕೆ.ಪಾಟೀಲ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಗದಗದ ಫೀಲ್ಡ್ ಮಾರ್ಷಲ್ ಕೆ.ಎಂ,ಕಾರ್ಯಪ್ಪ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಬಸ್ ತಡೆದು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ಆಟೋ ಚಾಲಕರು ಸೇರಿದಂತೆ ಹಲವರು ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಎಚ್ ಕೆ ಪಾಟೀಲ್ ಅಭಿಮಾನಿಗಳು,ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವಿರುಧ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೆ,ಶುಧ್ಧ ನೀರಿನ ಹರಿಕಾರ, ಮುತ್ಸದ್ದಿ ರಾಜಕಾರಣಿ ಎಚ್.ಕೆ.ಪಾಟೀಲ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.ಜೊತೆಗೆ ಗದಗ -ಬೆಟಗೇರಿ ನಗರಸಭೆಯ ೧೯ ಮಂದಿ ಕಾಂಗ್ರೆಸ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.


ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಸರಣಿ ಮುಂದುವರಿದಿದ್ದು, ಹಲವು ಶಾಸಕರು ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಬೆಂಬಲಿಗರ ಪ್ರತಿಭಟನೆ, ರಾಜೀನಾಮೆ ಎಚ್ಚರಿಕೆ ಹಾಗೂ ನಾಯಕರ ನಡುವಿನ ಆರೋಪ-ಪ್ರತ್ಯಾರೋಪಗಳು ಪಕ್ಷದ ನಾಯಕತ್ವಕ್ಕೆ ಹೊಸ ಸವಾಲು ತಂದಿವೆ. ಈ ಅಸಮಾಧಾನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ಹೇಗೆ ಶಮನಗೊಳಿಸಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.