
ಗದಗ,ಆ೩೧: ೧೨ನೇ ಶತಮಾನದ ಶಿವಶರಣ ನುಲಿಯ ಚಂದಯ್ಯನವರ ಕಾಯಕ ನಿಷ್ಠೆ ಹಾಗೂ `ದುಡಿಮೆಯೇ ದೇವರು’ ಎಂಬ ಸಂದೇಶ ಇಂದಿನ ಆಧುನಿಕ ಕಾಲಘಟ್ಟದಲ್ಲಿಯೂ ಅತ್ಯಂತ ಪ್ರಸ್ತುತವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನುಲಿಯ ಚಂದಯ್ಯ ಜಯಂತಿ-೨೦೨೬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ಸಮಕಾಲೀನರಾಗಿದ್ದ ನುಲಿಯ ಚಂದಯ್ಯನವರು ಕಾಯಕದ ಮೂಲಕ ಜೀವನ ನಡೆಸಿ, ತಾವು ದುಡಿದು ಗಳಿಸಿದ ಹಣದಲ್ಲಿಯೇ ಇತರರಿಗೆ ದಾಸೋಹ ಮಾಡುತ್ತಿದ್ದರು. `ಕಾಯಕವೇ ಕೈಲಾಸ’ ಎಂಬ ತತ್ವವನ್ನು ತಮ್ಮ ಜೀವನದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಂಡ ಮಹಾನ್ ಶರಣರಾಗಿದ್ದರು ಎಂದು ಹೇಳಿದರು.
ನುಲಿಯ ಚಂದಯ್ಯನವರ ಜೀವನ ಹಾಗೂ ವಿಚಾರಧಾರೆ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಕಾಯಕಕ್ಕೆ ಗೌರವ ನೀಡುವುದು, ಸ್ವಾವಲಂಬನೆಯಿAದ ಬದುಕುವುದು, ಪ್ರಾಮಾಣಿಕವಾಗಿ ದುಡಿಯುವುದು ಹಾಗೂ ಸಮಾಜದ ಒಳಿತಿಗಾಗಿ ತಮ್ಮದೇ ಆದ ಕೊಡುಗೆ ನೀಡುವುದು ಅವರ ಬದುಕಿನ ಪ್ರಮುಖ ಸಂದೇಶಗಳಾಗಿವೆ. ಇಂತಹ ಮಹನೀಯರ ಜೀವನಾದರ್ಶಗಳನ್ನು ಇಂದಿನ ಯುವಜನತೆ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಹುಲ್ಲಿನಿಂದ ಹಗ್ಗ ಹೊಸೆದು, ಅದನ್ನು ಮಾರಿ ಜೀವನ ಸಾಗಿಸುತ್ತಿದ್ದ ನುಲಿಯ ಚಂದಯ್ಯನವರು ತಮ್ಮ ಕಾಯಕದ ಜತೆಗೆ ದಾಸೋಹ ಹಾಗೂ ಶರಣರ ತತ್ವಗಳನ್ನು ಸಮಾಜದಲ್ಲಿ ಪಸರಿಸುವ ಕಾರ್ಯದಲ್ಲಿಯೂ ತೊಡಗಿದ್ದರು. ಕಲ್ಯಾಣ ಕ್ರಾಂತಿಯ ಬಳಿಕ ಒಂದೆಡೆ ನೆಲೆಸದೆ ನಾಡಿನಾದ್ಯಂತ ಸಂಚರಿಸಿ, ವಚನ ಸಾಹಿತ್ಯ ಹಾಗೂ ಶರಣರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಿದರು. ನಾಗಲಾಂಬಿಕೆ, ಹರಳಯ್ಯ ಸೇರಿದಂತೆ ಹಲವು ಶರಣರೊಂದಿಗೆ ಅವರು ಒಡನಾಟ ಹೊಂದಿದ್ದರು ಎಂದು ತಿಳಿಸಿದರು.
ತತ್ವಗಳ ಪ್ರಚಾರ ಮಾಡುತ್ತಾ ಶಿವಮೊಗ್ಗ ಜಿಲ್ಲೆಯ ನುಲೇನೂರಿಗೆ ಆಗಮಿಸಿದ ನುಲಿಯ ಚಂದಯ್ಯನವರು ಅಲ್ಲಿನ ಸಾಮಾನ್ಯ ಚಮ್ಮಾರರ ಮನೆಯಲ್ಲಿ ಆಶ್ರಯ ಪಡೆದರು. ಅವರ ವ್ಯಕ್ತಿತ್ವ ಹಾಗೂ ತತ್ವಗಳಿಂದ ಪ್ರಭಾವಿತರಾದ ಮನೆಯೊಡತಿ ಪದ್ಮಾವತಿ ಹಾಗೂ ಸ್ಥಳೀಯರು ಸೇರಿ ಕೆರೆಯ ದಂಡೆಯ ಮೇಲೆ ನುಲಿಯ ಚಂದಯ್ಯನವರಿಗೆ ಸಣ್ಣ ಮಠವೊಂದನ್ನು ನಿರ್ಮಿಸಿಕೊಟ್ಟರು. ಇದೇ ಮಠದಲ್ಲಿ ಅವರು ತಮ್ಮ ಕೊನೆಯ ದಿನಗಳನ್ನು ಕಳೆದರು. ಅಂತಿಮ ಕಾಲದವರೆಗೂ ಜನಸಾಮಾನ್ಯರಿಗೆ ಕಾಯಕದ ಮಹತ್ವವನ್ನು ಬೋಧಿಸುವ ಕಾರ್ಯದಲ್ಲಿ ನಿರತರಾಗಿದ್ದರು ಎಂದು ಹೇಳಿದರು.
ಕಾಯಕದಲ್ಲಿ ದೇವರನ್ನು ಕಾಣಬೇಕು
ಚಿಕ್ಕ ಕೆಲಸವಾಗಲಿ, ದೊಡ್ಡ ಕೆಲಸವಾಗಲಿ, ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಿದಾಗ ಮಾತ್ರ ಕಾಯಕದಲ್ಲಿ ದೇವರನ್ನು ಕಾಣಲು ಸಾಧ್ಯ. ೧೨ನೇ ಶತಮಾನದಲ್ಲಿ ಶರಣರು ಪ್ರತಿಪಾದಿಸಿದ ಶ್ರಮಸಂಸ್ಕöÈತಿಯನ್ನು ಇಂದಿನ ಯುವಜನತೆ ಹಾಗೂ ಸಮಾಜ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ಗದಗ ಶಾಖೆಯ ದಲಿತ ಸಾಹಿತ್ಯ ಅಕಾಡೆಮಿ ಕಾರ್ಯಾಧ್ಯಕ್ಷ ಡಾ. ಶಾಂತಕುಮಾರ ಬಿ. ಭಜಂತ್ರಿ ಉಪನ್ಯಾಸ ನೀಡಿ, ೧೨ನೇ ಶತಮಾನದ ಬಸವಾದಿ ಶರಣರು ಪ್ರತಿಪಾದಿಸಿದ ಸಮಾನತೆ, ಕಾಯಕ ಮತ್ತು ಸಾಮಾಜಿಕ ನ್ಯಾಯದ ಆಶಯಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ. ಶರಣರ ವಿಚಾರಧಾರೆಗಳು ಸಾಮಾಜಿಕ ಪರಿವರ್ತನೆಗೆ ಹಾಗೂ ಸಮಾನತೆಯ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ ಎಂದು ಹೇಳಿದರು.
ಸುಮಾರು ೭೦ ವರ್ಷಗಳ ಕಾಲ ಬದುಕಿದ್ದ ಚಂದಯ್ಯನವರ ಕಾಲಘಟ್ಟ ಹಾಗೂ ಜೀವನದ ಕುರಿತು ಇನ್ನಷ್ಟು ಸಮಗ್ರ ಸಂಶೋಧನೆಗಳು ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕಾಯಕವೇ ದೇವರೆಂದು ಸಾರಿದ ಚಂದಯ್ಯನವರ ಕಾಯಕ ನಿಷ್ಠೆಯನ್ನು ವಿವರಿಸಿದ ಅವರು, ಹಗ್ಗ ಹೊಸೆಯುವ ಸಂದರ್ಭದಲ್ಲಿ ಅವರ ಇಷ್ಟಲಿಂಗ ನೀರಿನಲ್ಲಿ ಬಿದ್ದರೂ ಗಮನಿಸದೆ ಕಾಯಕದಲ್ಲಿ ಮಗ್ನರಾಗಿದ್ದರು. ಸಾಕ್ಷಾತ್ ಲಿಂಗವೇ ಮನುಷ್ಯ ರೂಪದಲ್ಲಿ ಬಂದು ಅವರನ್ನು ತಮ್ಮ ಕಾಯಕದಿಂದ ವಿಮುಖರಾಗಿಸಲು ಮುಂದಾದರೂ ಅವರು ನಿರಾಕರಿಸಿ, ಕಾಯಕದ ಮಹತ್ವವನ್ನು ಸಾರಿದರು. ತಾವು ತಯಾರಿಸಿದ ಹಗ್ಗವನ್ನು ಲಿಂಗದ ಮೂಲಕ ಮಾರಾಟ ಮಾಡಿಸಿ, ಶ್ರಮಕ್ಕೆ ತಕ್ಕ ಮೌಲ್ಯವಾಗಿ ಒಂದು ಕಾಸನ್ನು ಮಾತ್ರ ಸ್ವೀಕರಿಸಿದರು. ಬಸವಣ್ಣನವರು ನೂರು ಕಾಸು ನೀಡಿದಾಗಲೂ ಅದನ್ನು ಸ್ವೀಕರಿಸದೆ ಪ್ರಾಮಾಣಿಕತೆಯ ಪರಮಾವಧಿಯನ್ನು ಮೆರೆದರು ಎಂದು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್., ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಾಬರ್ಚಿ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ವಿ. ಬಳ್ಳಾರಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಬಾಹುಬಲಿ ಜೈನ್ ಕಾರ್ಯಕ್ರಮ ನಿರೂಪಿಸಿದರು.































