
ತುಮಕೂರು, ಜೂ. ೬- ಮುಖ್ಯ ಚುನಾವಣಾ ಆಯೋಗದ ಆದೇಶದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ತೀವ್ರ ಪರಿಷ್ಕರಣೆ-೨೦೨೬ (ಎಸ್‌ಐಆರ್) ಕಾರ್ಯ ನಡೆಯುತ್ತಿದ್ದು, ಮತಗಟ್ಟೆ ಅಧಿಕಾರಿಗಳು (ಬಿಎಲ್‌ಓ) ಯಾವುದೇ ಲೋಪದೋಷ ಇಲ್ಲದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಮಾಡಬೇಕು ಎಂದು ಉಪವಿಭಾಗಾಧಿಕಾರಿ ಹಾಗೂ ಮತದಾರರ ನೋಂದಣಾಧಿಕಾರಿ ನಹೀದಾ ಜಮ್ ಜಮ್ ಸೂಚನೆ ನೀಡಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಸಬಾ ಪೂರ್ವ, ಕಸಬಾ ಪಶ್ಚಿಮ, ಕಸಬಾ, ಉತ್ತರ, ಗೂಳೂರು ಹೋಬಳಿ, ಹೆಬ್ಬೂರು, ಊರ್ಡಿಗೆರೆ, ಬೆಳ್ಳಾವಿ ಹೋಬಳಿವಾರು ಮತಗಟ್ಟೆ ಅಧಿಕಾರಿಗಳು (ಬಿಎಲ್‌ಓ) ಹಾಗೂ ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಪ್ರಕ್ರಿಯೆ ದೇಶದಲ್ಲಿ ಇದೇ ಮೊದಲಲ್ಲ. ಕರ್ನಾಟಕದಲ್ಲಿ ಕೂಡ ೨೦೦೨ರಲ್ಲಿ ಸಮಗ್ರ ಪರಿಷ್ಕರಣೆ ಆಗಿದ್ದು, ಈಗ ೨೦೨೬ರಲ್ಲಿ ಮಾಡಲಾಗುತ್ತಿದೆ. ಇದು ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ರಾಜ್ಯದ ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳಿಗೆ ತರಬೇತಿ ನೀಡಿದ್ದು, ಅದರಂತೆ ತುಮಕೂರು ಜಿಲ್ಲೆಯಲ್ಲಿ ಕೂಡ ಈ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಮತಗಟ್ಟೆ ಅಧಿಕಾರಿಗಳು ಪ್ರತಿ ಮನೆ ಮನೆಗೂ ಭೇಟಿ ನೀಡಿ ಗಣತಿ ನಮೂನೆಯನ್ನು ಕೊಟ್ಟು ಭರ್ತಿ ಮಾಡಿಸಬೇಕು. ನಂತರ ಆ ಮನೆಯವರು ಭರ್ತಿ ಮಾಡಿದ ಬಳಿಕ ನಮೂನೆಯನ್ನು ಪಡೆದು ಅಪ್‌ಲೋಡ್ ಮಾಡಬೇಕು ಎಂದು ತಿಳಿಸಿದರು.
ಯಾವುದೇ ಒಬ್ಬ ಅರ್ಹ ಮತದಾರರು ಮತಪಟ್ಟಿಯಿಂದ ಹೊರ ಗುಳಿಯಬಾರದು, ಅನರ್ಹರ ಹೆಸರು ಮತಪಟ್ಟಿಯಲ್ಲಿ ಸೇರಿರಬಾರದು ಎಂಬುದು ಎಸ್‌ಐಆರ್ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಜನಸಾಮಾನ್ಯರಲ್ಲಿ ಎಸ್‌ಐಆರ್ ಮಾಡಿದರೆ ನಮ್ಮ ಮತದಾನದ ಹಕ್ಕು ಹೋಗುತ್ತದೆ ಎಂಬ ಭಯ ಇದೆ. ಅವರಿಗೆ ಎಸ್‌ಐಆರ್ ಉದ್ದೇಶವನ್ನು ಮನವರಿಕೆ ಮಾಡಿಕೊಟ್ಟು ಎಸ್‌ಐಆರ್ ಬಗ್ಗೆ ಇರುವ ಭಯವನ್ನು ಅವರ ಮನಸ್ಸಿನಿಂದ ತೆಗೆದು ಹಾಕಬೇಕು ಎಂದರು.
೨೦೨೬ರ ವಿಶೇಷ ಸಮಗ್ರ ತೀವ್ರ ಪರಿಷ್ಕರಣೆ ಕುರಿತು ೨೦೦೨ರ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು ೨೦೦೫ರ ಮತದಾರರ ಪಟ್ಟಿಗೆ ಮ್ಯಾಪಿಂಗ್ ಮಾಡಬೇಕು ಎಂದು ಅವರು ತಿಳಿಸಿದರು.
೨೦೦೨ರ ಮತದಾರರ ಪಟ್ಟಿಗೆ ಮತದಾರರು ಮ್ಯಾಪಿಂಗ್ ಆಗಿದ್ದಾರೆ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಯಾರು ಮ್ಯಾಪಿಂಗ್ ಆಗಿಲ್ಲವೋ ಅಂತಹವರನ್ನು ಮೊದಲು ಮ್ಯಾಪಿಂಗ್ ಮಾಡುವುದು ಬಹಳ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಪ್ರತಿ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಓ) ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಮತದಾರರಿದ್ದಾರೆ. ಎಷ್ಟು ಮನೆಗಳು ಬರುತ್ತವೆ ಎಂಬ ಮಾಹಿತಿಗಳನ್ನು ಕಲೆ ಹಾಕಬೇಕು. ನಂತರ ಪ್ರತಿ ಮನೆಗಳಿಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ನೀಡಿ ಭರ್ತಿ ಮಾಡಿಸಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹೊಸ ಮತದಾರರ ನೋಂದಣಿ ಅಥವಾ ವರ್ಗಾವಣೆ ಸಂದರ್ಭದಲ್ಲಿ ನಮೂನೆ ೬/೮ ತುಂಬುವುದಾದಲ್ಲಿ ಚುನಾವಣಾ ಆಯೋಗ ನಿರ್ಧಿಷ್ಟಪಡಿಸಿರುವ ೧೨ ದಾಖಲೆಗಳಲ್ಲಿ ಒಂದನ್ನು ಘೋಷಣಾ ನಮೂನೆಯೊಂದಿಗೆ ಸ್ವಯಂ ದೃಢೀಕರಿಸಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದರು.
ಒಂದು ಬಾರಿ ಮತದಾರರ ಮನೆಗೆ ಭೇಟಿ ನೀಡಿ ನಮೂನೆ ಕೊಟ್ಟ ನಂತರ ಮತ್ತೆ ಆ ಮನೆಗೆ ನಮೂನೆ ಕೊಡಲು ಅವಕಾಶ ಇರುವುದಿಲ್ಲ. ಹಾಗಾಗಿ ನಮೂನೆಯನ್ನು ಕೊಡುವಾಗಲೇ ಮತದಾರರಿಗೆ ನಮೂನೆ ಕಳೆಯದಂತೆ ಅಥವಾ ಹರಿಯದಂತೆ ನೋಡಿಕೊಳ್ಳುವಂತೆ ತಿಳಿಸಬೇಕು ಎಂದು ಹೇಳಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ೨೧೧೭೯೯ ಮತದಾರರಿದ್ದು, ಇದುವರೆಗೂ ೨೦,೨೬೫೮ ಮತದಾರರನ್ನು ಬಿಎಲ್‌ಓ ಆಪ್ ಮೂಲಕ ಮ್ಯಾಪಿಂಗ್ ಮಾಡಲಾಗಿದೆ. ಈವರೆವಿಗೆ ಶೇ. ೯೫.೬೮ ರಷ್ಟು ಪ್ರಗತಿಯಾಗಿದೆ. ಬಾಕಿ ಇರುವ ಮತದಾರರ ಹೆಸರುಗಳನ್ನು ಮ್ಯಾಪಿಂಗ್ ಮಾಡಬೇಕಾಗಿದೆ ಎಂದು ತಿಳಿಸಿದರು.
ಈಗಾಗಲೇ ಚುನಾವಣಾ ಆಯೋಗ ಎಲ್ಲಾ ಬಿಎಲ್‌ಓ ಗಳ ಮಾಹಿತಿಯನ್ನು ಪಡೆದುಕೊಂಡಿದೆ. ಆದ್ದರಿಂದ ಯಾರೂ ಸಹ ನಿರ್ಲಕ್ಷ್ಯ ವಹಿಸದೆ ಪ್ರಾಮಾಣಿಕವಾಗಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಮಾಡಬೇಕು. ಒಂದು ವೇಳೆ ಏನಾದರೂ ಲೋಪವಾದರೆ ಅಂತಹ ಅಧಿಕಾರಿಗಳ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ತರಬೇತಿ ಕಾರ್ಯಗಾರದಲ್ಲಿ ತಹಶೀಲ್ದಾರ್ ರಾಜೇಶ್ವರಿ, ಬಿಎಲ್‌ಓಗಳು ಹಾಗೂ ಬಿಎಲ್‌ಓಗಳ ಮೇಲ್ವಿಚಾರಕರು ಪಾಲ್ಗೊಂಡಿದ್ದರು.


































