
ಬೆಂಗಳೂರು, ಅ. ೬- ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್)ಯಲ್ಲಿ ಆಡಳಿತರೂಢಾ ಕಾಂಗ್ರೆಸ್ ಸರ್ಕಾರ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು ಹಸ್ತಕ್ಷೇಪ ನಡೆಸುತ್ತಿದೆ ಎಂದು ಎನ್‌ಡಿಎ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕರುಗಳದಾ ಆರ್. ಅಶೋಕ್, ಚಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಎನ್‌ಡಿಎ ನಾಯಕರ ನಿಯೋಗ ಇಂದು ಲೋಕಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಸರ್ಕಾರದ ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದೆ.
ಫಾರಂ-೭ ಸಲ್ಲಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಎನ್‌ಡಿಎ ನಾಯಕರು ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಎಫ್‌ಐಆರ್ ದಾಖಲಿಸದಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಫಾರಂ-೭ ಎಷ್ಟು ಬೇಕಾದರೂ ಕೊಡಬಹುದು. ಅದನ್ನು ಪರಿಶೀಲಿಸುವ ಕೆಲಸ ಬಿಎಲ್‌ಓಗಳದ್ದು ಮುಸ್ಲಿಂ ಮತದಾರರನ್ನು ತೆಗೆಯುತ್ತಿದ್ದಾರೆ ಎಂದು ಕಾಂಗ್ರೆಸ್ಸನವರು ನಾಟಕ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ಕಳೆದ ವಾರ ಮುಖ್ಯಮಂತ್ರಿ ಹಾಗೂ ಸಂಪುಟ ಸದಸ್ಯರ ನಿಯಮಗಳನ್ನು ಗಾಳಿಗೆ ತೂರಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮುಂಮದೆ ನಿಷೇಧಾಜ್ಞೆ ನಡುವೆಯು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ಉಚ್ಛ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ. ಜತೆಗೆ ಚುನಾವಣಾ ಆಯೋಗದ ಮೇಲೆ ರಾಜಕೀಯ ಒತ್ತಡ ಹೇರುವ ತಂತ್ರವಾಗಿದೆ. ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದು ಎನ್‌ಡಿಎ ನಾಯಕರು ರಾಜ್ಯಪಾಲರಿಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಈ ನಿಯೋಗದಲ್ಲಿ ಸಂಸದರಾದ ಪಿ.ಸಿ. ಮೋಹನ್, ಶಾಸಕರುಗಳಾದ ಸಿ.ಬಿ. ಸುರೇಶ್‌ಬಾಬು, ಎಂ. ಮುನಿರಾಜು, ಶ್ರೀವತ್ಸಾ, ಮಂಜುಳಾ ಅರವಿಂದ ಲಿಂಬಾವಳಿ, ಶರವಣ, ಬೋಜೇಗೌಡ ಸೇರಿದಂತೆ ಜೆಡಿಎಸ್‌ನ ಹಲವು ನಾಯಕರುಗಳು ಇದ್ದರು.
























