Home ಮುಖಪುಟ ಸುದ್ದಿ ಕೈ ಕಾಕ್ರೋಚ್ ನಡುವೆ ‘ಕ್ರೆಡಿಟ್’ ಕದನ

ಕೈ ಕಾಕ್ರೋಚ್ ನಡುವೆ ‘ಕ್ರೆಡಿಟ್’ ಕದನ

ನವದೆಹಲಿ, ಅ.೬-ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ವಿವಿಧ ಪಕ್ಷಗಳು ಹಾಗೂ ಸಂಘಟನೆಗಳು ನಡೆಸುತ್ತಿರುವ ಹೋರಾಟಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರಯತ್ನ ಇದೀಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಪ್ರತಿಭಟನೆಗಳ ನೇತೃತ್ವ ಹಾಗೂ ಹೋರಾಟದ ‘ಕ್ರೆಡಿಟ್’ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರ ನಡುವೆ ವಾಕ್ಸಮರ ತೀವ್ರಗೊಂಡಿದೆ.

ಕಳೆದ ಕೆಲವು ಸಮಯದಿಂದಲೇ ಎರಡೂ ಪಕ್ಷಗಳ ನಡುವೆ ಹೋರಾಟಗಳ ನೇತೃತ್ವದ ವಿಚಾರವಾಗಿ ಭಿನ್ನಾಭಿಪ್ರಾಯ ಮುಂದುವರಿದಿದೆ. ವಿಶೇಷವಾಗಿ ಅಸ್ಸಾಂನಲ್ಲಿ ಸಿಜೆಪಿ ಕೈಗೊಂಡಿದ್ದ ಶಾಲೆಗಳ ಸುಧಾರಣೆ ಅಭಿಯಾನ ಹಾಗೂ ದೆಹಲಿಯಲ್ಲಿ ನಡೆದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಯಾವ ಪಕ್ಷದ ಹೋರಾಟಕ್ಕೆ ಹೆಚ್ಚಿನ ಜನಬೆಂಬಲ ದೊರೆಯಿತು ಎಂಬ ವಿಚಾರದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿದ್ದವು.

ಅಸ್ಸಾಂ ಶಾಲಾ ಅಭಿಯಾನದಿಂದ ಭಿನ್ನಾಭಿಪ್ರಾಯ
ಅಸ್ಸಾಂನಲ್ಲಿ ಸಿಜೆಪಿ ನಡೆಸಿದ ಶಾಲೆಗಳ ಸುಧಾರಣೆ ಅಭಿಯಾನಕ್ಕೆ ಕಾಂಗ್ರೆಸ್ ನಿರೀಕ್ಷಿತ ಬೆಂಬಲ ನೀಡಲಿಲ್ಲ ಎಂಬುದು ಸಿಜೆಪಿ ನಾಯಕರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ. ತಮ್ಮ ಹೋರಾಟಗಳಿಗೆ ಕಾಂಗ್ರೆಸ್ ಬೆಂಬಲ ನೀಡದೆ, ಬಳಿಕ ಅದೇ ವಿಚಾರಗಳನ್ನು ತನ್ನ ರಾಜಕೀಯ ವೇದಿಕೆಯಲ್ಲಿ ಪ್ರಸ್ತಾಪಿಸುತ್ತಿದೆ ಎಂಬ ಆರೋಪವನ್ನು ಸಿಜೆಪಿ ನಾಯಕರು ಮಾಡುತ್ತಿದ್ದಾರೆ.
ಇದೇ ರೀತಿಯಲ್ಲಿ ದೆಹಲಿಯಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ನಡೆದ ಪ್ರತಿಭಟನೆಗಳ ಸಂದರ್ಭದಲ್ಲೂ ಎರಡೂ ಪಕ್ಷಗಳ ನಡುವೆ ಹೋರಾಟದ ನೇತೃತ್ವದ ಕುರಿತು ಪೈಪೋಟಿ ಕಂಡುಬಂದಿತ್ತು.

‘ಸತ್ಯಾಗ್ರಹ’ ವೇದಿಕೆ ಮೂಲಕ ಹೊಸ ಹೆಜ್ಜೆ
ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಇತ್ತೀಚೆಗೆ ‘ಸತ್ಯಾಗ್ರಹ’ ಎಂಬ ಡಿಜಿಟಲ್ ವೇದಿಕೆಗೆ ಚಾಲನೆ ನೀಡಿರುವುದು ಸಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ವಿವಿಧೆಡೆ ಪ್ರತ್ಯೇಕವಾಗಿ ನಡೆಯುತ್ತಿರುವ ಹೋರಾಟಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಈ ವೇದಿಕೆಯನ್ನು ರೂಪಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ವೇದಿಕೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿ, “ಬಿಡಿಬಿಡಿಯಾಗಿ ನಡೆಯುತ್ತಿರುವ ಹೋರಾಟಗಳು ಒಂದಾಗಬೇಕಿದೆ. ಸಂಸತ್ತಿನಲ್ಲಿ ಮತ್ತು ರಸ್ತೆಯಲ್ಲಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ” ಎಂದು ಭರವಸೆ ನೀಡಿದ್ದರು.

ಸಿಜೆಪಿಯಿಂದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಆದರೆ ರಾಹುಲ್ ಗಾಂಧಿ ಅವರ ಈ ಪ್ರಯತ್ನವನ್ನು ಸಿಜೆಪಿ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ. ಸಿಜೆಪಿ ನಾಯಕರಾದ ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್, ಕಾಂಗ್ರೆಸ್ ತನ್ನ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಈಗಾಗಲೇ ನಡೆಯುತ್ತಿರುವ ಹೋರಾಟಗಳ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
“ಸ್ವಯಂಘೋಷಿತ ಉದಾರವಾದಿ ವ್ಯವಸ್ಥೆಯು ಸಿಜೆಪಿ ಸಂಸ್ಥಾಪಕ ಅಭೀಜಿತ್ ದಿಪ್ಕೆ ಅವರನ್ನು ಕುಗ್ಗಿಸಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ನಾಯಕರು ತಾವೇ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಗುತ್ತಿಗೆದಾರರು ಎಂಬಂತೆ ವರ್ತಿಸುತ್ತಿದ್ದಾರೆ” ಎಂದು ಅವರು ಟೀಕಿಸಿದ್ದಾರೆ.

ಒಗ್ಗಟ್ಟಿನ ಹೋರಾಟಕ್ಕೆ ಅಡ್ಡಿ?

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ವಿಚಾರಗಳಲ್ಲಿ ಪ್ರತಿಪಕ್ಷಗಳು ಮತ್ತು ಸಂಘಟನೆಗಳು ಒಟ್ಟಾಗಿ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್?ಸಿಜೆಪಿ ನಡುವಿನ ಈ ಸಂಘರ್ಷ ಮಹತ್ವ ಪಡೆದಿದೆ. ವಿವಿಧ ಹೋರಾಟಗಳನ್ನು ಒಂದೇ ವೇದಿಕೆಗೆ ತರುವ ಕಾಂಗ್ರೆಸ್ ಪ್ರಯತ್ನಕ್ಕೆ ಇತರ ಪಕ್ಷಗಳು ಹೇಗೆ ಪ್ರತಿಕ್ರಿಯಿಸಲಿವೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

ಹೋರಾಟಗಳ ನೇತೃತ್ವ, ರಾಜಕೀಯ ಪ್ರಭಾವ ಹಾಗೂ ಅದರ ‘ಕ್ರೆಡಿಟ್’ ಯಾರಿಗೆ ಸೇರಬೇಕು ಎಂಬ ವಿಚಾರದಲ್ಲಿನ ಪೈಪೋಟಿ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.