Home ಮುಖಪುಟ ಸುದ್ದಿ ಪ್ರತಿಪಕ್ಷಗಳ ವಿರುದ್ಧ ನಾಗೇಂದ್ರ ದಲಿತಾಸ್ತ್ರ

ಪ್ರತಿಪಕ್ಷಗಳ ವಿರುದ್ಧ ನಾಗೇಂದ್ರ ದಲಿತಾಸ್ತ್ರ

ಬೆಂಗಳೂರು, ಆ. ೧೯- ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷಗಳು ತಮ್ಮ ರಾಜೀನಾಮೆಗೆ ಪಟ್ಟು ಹಿಡಿದಿರುವುದರ ವಿರುದ್ಧ ಕಿಡಿಕಾರಿರುವ ರಾಜ್ಯದ ಯೋಜನಾ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ಅವರು, ದಲಿತ ಸಮುದಾಯದವರು ಮತ್ತೆ ಮಂತ್ರಿಯಾಗಿರುವುದನ್ನು ಪ್ರತಿಪಕ್ಷಗಳು ಸಹಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.


ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ನಾನೇಕ ರಾಜೀನಾಮೆ ನೀಡಬೇಕು. ವಿಪಕ್ಷ ನಾಯಕರು ಸುಖಾಸುಮ್ಮನೆ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ ಅಷ್ಟೇ. ಈ ಹಿಂದೆ ಹಗರಣ ಬೆಳಕಿಗೆ ಬಂದಾಗ ತನಿಖೆಗೆ ಪಾರದರ್ಶಕವಾಗಿ ನಡೆಯಲಿ ಎನ್ನುವ ಕಾರಣಕ್ಕೆ ರಾಜೀನಾಮೆ ನೀಡಿದ್ದೆ ಎಂದು ಅವರು ಹೇಳಿದರು.


ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ನನ್ನ ಗಮನಕ್ಕೆ ಬಾರದೆಯೇ ಹಣ ವರ್ಗಾವಣೆಯಾಗಿದೆ. ನಿಗಮದ ಅಧ್ಯಕ್ಷರ ಗಮನಕ್ಕೂ ಹಣ ವರ್ಗಾವಣೆಯಾಗಿರುವುದು ಬಂದಿರಲಿಲ್ಲ. ಇದೆಲ್ಲಾ ಗೊತ್ತಾದ ನಂತರ ತನಿಖೆಗೆ ಎಸ್‌ಐಟಿ ರಚನೆಯಾಗಿತ್ತು. ಎಸ್‌ಐಟಿ ತನಿಖೆ ಪಾರದರ್ಶಕವಾಗಿ ನಡೆಯಲಿ ಎಂಬ ಕಾರಣಕ್ಕೆ ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ಎಂದರು.


ಈ ಪ್ರಕರಣದ ತನಿಖೆಯನ್ನು ಎಸ್‌ಐಟಿ ಉತ್ತಮವಾಗಿ ಮಾಡಿದ್ದು, ಎಸ್‌ಐಟಿ ತನಿಖೆಯಲ್ಲಾಗಲೀ, ಬೇರೆ ತನಿಖೆಯಲ್ಲಾಗಲೀ ನನ್ನ ಖಾತೆಗೆ ಹಣ ಹೋಗಿರುವ ವಿವರಗಳು ಇಲ್ಲ. ಇಷ್ಟಾದರೂ ಪ್ರತಿಪಕ್ಷಗಳು ದಲಿತ ವ್ಯಕ್ತಿ ಮತ್ತೆ ಮಂತ್ರಿಯಾಗಿರುವುದನ್ನು ಸಹಿಸದೆ ರಾಜೀನಾಮೆಗೆ ಒತ್ತಾಯಿಸುತ್ತಿವೆ ಎಂದು ದೂರಿದರು.


ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನನಗೆ ಶಿಕ್ಷೆಯಾಗಿದ್ದರೆ ರಾಜ್ಯಪಾಲರು ಪ್ರಮಾಣ ವಚನ ಸ್ವೀಕರಿಸಲು ಬಿಡುತ್ತಿದ್ದರಾ, ಇದನ್ನು ವಿಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ನಾನು ಮಂತ್ರಿಯಾಗಬಾರದು, ಅಧಿಕಾರ ನಡೆಸಬಾರದು ಎಂದು ವಿಪಕ್ಷಗಳು ರಾಜಕೀಯ ದುರುದ್ದೇಶದಿಂದ ತಮ್ಮ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಗದ್ದಲ ಮಾಡುತ್ತಿವೆ ಎಂದು ದೂರಿದರು.


ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಏನಾಗಿದೆ ಎಂಬುದನ್ನು ನಾನು ನನ್ನ ಸಮುದಾಯಕ್ಕೆ ಹೇಳುತ್ತೇನೆ. ನಮ್ಮ ಸಮುದಾಯದವರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಿತ್ಯವೂ ಸದನದಲ್ಲಿ ಘೋಷಣೆ ಕೂಗುತ್ತಿರುವುದು ನನ್ನ ಮನಸ್ಸಿಗೆ ನೋವಾಗಿದೆ ಎಂದು ಅವರು ಹೇಳಿದರು.


ವಾಲ್ಮೀಕಿ ನಿಮಗದ ಹಗರಣದಲ್ಲಿ ಯಾರ್ಯಾರೊ ಹೆಸರು ಹೇಳಬೇಕೆಂದು ಇ.ಡಿ.ಯವರು ನನ್ನ ಮೇಲೆ ಒತ್ತಡ ಹೇರಿದ್ದರು. ಅದರ ವಿರುದ್ಧ ನಾನು ನ್ಯಾಯಾಲಯಕ್ಕೆ ಹೋಗಿದ್ದೆ ಎಂದರು.


ಮನುವಾದಿಗಳು ನನ್ನ ವಿರುದ್ಧ ಹುನ್ನಾರ ನಡೆಸಿದ್ದಾರೆ. ವರ್ಣಾಶ್ರಮ ಪದ್ದತಿ ಇನ್ನೂ ಜೀವಂತ ಇದೆ ಎಂದು ಅವರು ಆರೋಪಿಸಿದರು.
ನಾನು ದಲಿತನಾಗಿಯೇ ಹುಟ್ಟಿದ್ದೇನೆ, ದಲಿತನಾಗಿಯೇ ಸಾಯುತ್ತೇನೆ. ಸಂವಿಧಾನ ಇಲ್ಲದಿದ್ದರೆ ನಮಗೆ ರಕ್ಷಣೆ ಇರುತ್ತಿರಲಿಲ್ಲ ಎಂದು ಅವರು ಹೇಳಿದರು.


ವಿಧಾನಸಭೆಯ ಅಧಿವೇಶನವನ್ನು ಜ್ವಲಂತ ಸಮಸ್ಯೆಗಳ ಚರ್ಚೆಗೆ ಕರೆಯಲಾಗಿತ್ತು. ಆದರೆ ಪ್ರತಿಪಕ್ಷಗಳು ಎಲ್ಲವನ್ನು ಬಿಟ್ಟು ನನ್ನನ್ನು ಹಿಡಿದುಕೊಂಡಿದ್ದಾರೆ. ಎಲ್ಲಾ ಮನುವಾದಿಗಳ ಹುನ್ನಾರ, ಕುತಂತ್ರ ಎಂದು ಅವರು ದೂರಿದರು.


ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಮತ್ತಿತರರು ಉಪಸ್ಥಿತರಿದ್ದರು.