Home ಮುಖಪುಟ ಸುದ್ದಿ ಹೋಟೆಲ್ ನಲ್ಲಿ ಅಗ್ನಿ ದುರಂತ:೯ ಮಂದಿ ಸಜೀವ ದಹನ

ಹೋಟೆಲ್ ನಲ್ಲಿ ಅಗ್ನಿ ದುರಂತ:೯ ಮಂದಿ ಸಜೀವ ದಹನ

ಕೋಲ್ಕತ್ತಾ, ಆ.೧೯: ಕೋಲ್ಕತ್ತಾದ ಮಿರ್ಜಾ ಗಾಲಿಬ್ ಸ್ಟ್ರೀಟ್‌ನಲ್ಲಿರುವ ಹೋಟೆಲ್‌ನಲ್ಲಿ ಬುಧವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ ೯ ಮಂದಿ ಮೃತಪಟ್ಟಿದ್ದಾರೆ ಹಾಗೂ ೬ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಮೃತಪಟ್ಟವರು ವೈದ್ಯಕೀಯ ಚಿಕಿತ್ಸೆಗಾಗಿ ಕೋಲ್ಕತ್ತಾಗೆ ಆಗಮಿಸಿದ್ದ ಬಾಂಗ್ಲಾದೇಶದ ನಾಗರಿಕರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಬೆಂಕಿ ಸುಮಾರು ಮುಂಜಾನೆ ೨ ಗಂಟೆಗೆ ಕಾಣಿಸಿಕೊಂಡಿದೆ. ಮಾಹಿತಿ ದೊರೆತ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.


ಐದು ಅಂತಸ್ತಿನ ಕಟ್ಟಡದಿಂದ ಸುಮಾರು ೮೦ ಮಂದಿಯನ್ನು ರಕ್ಷಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡ ಆರು ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಹಾಗೂ ಸಾವಿನ ಪರಿಸ್ಥಿತಿಗಳ ಕುರಿತು ತನಿಖೆ ಮುಂದುವರಿದಿದೆ.


“ದಟ್ಟ ಹೊಗೆಯಿಂದಾಗಿ ಅಗ್ನಿಶಾಮಕ ಸಿಬ್ಬಂದಿಗೆ ಮೆಟ್ಟಿಲುಗಳ ಮೂಲಕ ಮೇಲಿನ ಮಹಡಿಗಳಿಗೆ ತೆರಳಿ ರಕ್ಷಣಾ ಕಾರ್ಯ ನಡೆಸುವುದು ಕಷ್ಟವಾಗಿತ್ತು. ಒಂಬತ್ತು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ,” ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.


“ಸದ್ಯ ನಮ್ಮ ಮೊದಲ ಆದ್ಯತೆ ಸಿಕ್ಕಿಬಿದ್ದಿರುವವರನ್ನು ರಕ್ಷಿಸುವುದು ಮತ್ತು ಬೆಂಕಿಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚುವುದು. ಬೆಂಕಿಯನ್ನು ನಂದಿಸಲಾಗಿದ್ದು, ಕಟ್ಟಡವನ್ನು ತಂಪುಗೊಳಿಸುವ ಕಾರ್ಯ ನಡೆಯುತ್ತಿದೆ,” ಎಂದು ಅವರು ಹೇಳಿದ್ದಾರೆ.


ಅದೃಷ್ಟವಶಾತ್, ಪಶ್ಚಿಮ ಬಂಗಾಳ ಅಗ್ನಿಶಾಮಕ ದಳದ ಕೇಂದ್ರ ಕಚೇರಿ ಹೋಟೆಲ್ ಕಟ್ಟಡದ ಸಮೀಪದಲ್ಲೇ ಇದೆ.


ಅಗ್ನಿಶಾಮಕ ದಳದ ಸಚಿವ ಕೌಶಿಕ್ ಚೌಧರಿ, “ಕಟ್ಟಡದ ಒಳಗಿನ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಈ ಕಟ್ಟಡದಲ್ಲಿ ಹಲವಾರು ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ನಡೆಯುತ್ತಿದ್ದ ವ್ಯವಸ್ಥೆಯನ್ನು ನೋಡಿ ನನಗೆ ಆಘಾತವಾಗಿದೆ,” ಎಂದು ಹೇಳಿದ್ದಾರೆ.


ಅಗ್ನಿ ಅವಘಡದ ಕಾರಣದ ಕುರಿತು ಮಾತನಾಡಿದ ಸಚಿವರು, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಿದ್ದಾರೆ. ಆದರೆ, ವಿಧಿವಿಜ್ಞಾನ (ಫಾರೆನ್ಸಿಕ್) ಪರೀಕ್ಷೆಯ ನಂತರವೇ ನಿಖರ ಕಾರಣ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.


“ಕಟ್ಟಡದ ನಿರ್ವಹಣೆಯವರು ಮೂಲಭೂತ ಅಗ್ನಿ ಸುರಕ್ಷತೆ ಮತ್ತು ನಿರ್ಮಾಣ ನಿಯಮಗಳನ್ನು ಪಾಲಿಸಿಲ್ಲ. ಹೋಟೆಲ್‌ನ ಕಾರ್ಯನಿರ್ವಹಣೆಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂಬ ಆರೋಪಗಳಿವೆ,” ಎಂದು ಸಚಿವರು ತಿಳಿಸಿದ್ದಾರೆ.


ಪ್ರತ್ಯೇಕ ಘಟನೆಯಲ್ಲಿ ೮ ಮಂದಿ ಸಾವು


ಇದೇ ವೇಳೆ, ಬಿರ್ಭೂಮ್ ಜಿಲ್ಲೆಯಲ್ಲಿ ನಡೆದ ಮತ್ತೊಂದು ಅಗ್ನಿ ಅವಘಡದಲ್ಲಿ ೮ ಮಂದಿ ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ಸುಮಾರು ೫ ಗಂಟೆಗೆ ತಾರಾಪೀಠದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆರೆಯ ಸಮೀಪ ಹಾಗೂ ತಾರಾಪೀಠ ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲಿರುವ ನಾಲ್ಕು ಅಂತಸ್ತಿನ ಹೋಟೆಲ್ ಬಿದೇಶಿನಿಯ ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿ ಹೊತ್ತಿಕೊಂಡಾಗ ಹೆಚ್ಚಿನ ಅತಿಥಿಗಳು ನಿದ್ರೆಯಲ್ಲಿದ್ದರು ಎಂದು ಹೇಳಲಾಗಿದೆ.