Home ಜಿಲ್ಲೆ ಕಲಬುರಗಿ ಕುಖ್ಯಾತ ಮನೆಗಳ್ಳನ ಬಂಧನ: 22.65 ಲಕ್ಷ ರೂ.ಮೌಲ್ಯದ ಚಿನ್ನ, ಬೆಳ್ಳಿ ಆಭರಣ ವಶ

ಕುಖ್ಯಾತ ಮನೆಗಳ್ಳನ ಬಂಧನ: 22.65 ಲಕ್ಷ ರೂ.ಮೌಲ್ಯದ ಚಿನ್ನ, ಬೆಳ್ಳಿ ಆಭರಣ ವಶ

ಕಲಬುರಗಿ,ಆ.19-ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 3 ಮತ್ತು ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಒಂದು ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸಿ 22.65 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಎನ್‍ಜಿಓ ಕಾಲೋನಿಯಲ್ಲಿರುವ ಉಗ್ರ ಹನುಮಾನ ದೇವಸ್ಥಾನ ಪಕ್ಕದ ಕೋಣೆಯ ಬೀಗ ಮುರಿದು ಕಳ್ಳರು 110000 ರೂ.ಮೌಲ್ಯದ 1100 ಗ್ರಾಂ. ಬೆಳ್ಳಿ ಆಭರಣ ಕಳವು ಮಾಡಿದ್ದಾರೆ ಎಂದು ಉಗ್ರ ಹನುಮಾನ ದೇವಸ್ಥಾನ ಟ್ರಸ್ಟ್ ಉಪಾಧ್ಯಕ್ಷ ಹಣಮಂತರಾಯ ಪಾಟೀಲ ಅವರು ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಆರೋಪಿ ಮತ್ತು ಕಳವಾದ ಬೆಳ್ಳಿಯ ಆಭರಣಗಳ ಪತ್ತೆಗೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಶಾಲೂ, ಪ್ರವೀಣ್ ಹೆಚ್.ನಾಯಕ್, ಕಲಬುರಗಿ ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ ಹಾಗೂ ರಾಘವೇಂದ್ರ ನಗರ ಪೊಲೀಸ್ ಠಾಣೆ ಪಿ.ಐ.ವಾಜೀದ್ ಪಟೇಲ್ ಅವರ ನೇತೃತ್ವದಲ್ಲಿ ಪಿಎಸ್‍ಐ ಮಲ್ಲಿಕಾರ್ಜುನ ಜಾನೆ, ಸಿಬ್ಬಂದಿಗಳಾದ ಮಲ್ಲನಗೌಡ, ರಾಜಕುಮಾರ, ಉಮೇಶ, ಆರೇಶ, ಶರಣಬಸವ, ಕರಣಕುಮಾರ ಹಾಗೂ ಬಸವರಾಜ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ಮಾಹಿತಿ ಕಲೆ ಹಾಕಿ ಆಳಂದ ತಾಲ್ಲೂಕಿನ ಧಂಗಾಪೂರ ಗ್ರಾಮದ ಈಶ್ವರ ತಂದೆ ಗೋವಿಂದ ಜಾಧವ್ (20) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಮತ್ತು ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಮನೆ ಕಳ್ಳತನ ಸೇರಿ ನಾಲ್ಕು ಮನೆ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯಿಂದ 20.25 ಲಕ್ಷ ರೂ.ಮೌಲ್ಯದ 136 ಗ್ರಾಂ.ಬಂಗಾರದ ಆಭರಣ, 2.30ಲಕ್ಷ ರೂ.ಮೌಲ್ಯದ 1000 ಗ್ರಾಂ.ಬೆಳ್ಳಿ ಆಭರಣ ಸೇರಿ 22.65 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿಸಿದರು.
ಕುಖ್ಯಾತ ಮನೆಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಅವರು ಶ್ಲಾಘಿಸಿದರು.
ಡಿಸಿಪಿ ಪ್ರವೀಣ್ ಹೆಚ್.ನಾಯಕ್, ಕಲಬುರಗಿ ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ ಹಾಗೂ ರಾಘವೇಂದ್ರ ನಗರ ಪೊಲೀಸ್ ಠಾಣೆ ಪಿ.ಐ.ವಾಜೀದ್ ಪಟೇಲ್ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.