
ಕಲಬುರಗಿ,ಆ.19-ಕುಡಿದು ಏಕೆ ದುಡ್ಡು ಹಾಳು ಮಾಡುತಿ, ಸಂಸಾರ ಅಡಚಣೆಗೆ ದುಡ್ಡು ಬೇಕು ಎಂದು ಹೇಳಿದ ಪತ್ನಿಯ ಜೊತೆಗೆ ಜಗಳ ತೆಗೆದು, ಅವಾಚ್ಯವಾಗಿ ಬೈಯ್ದು, ಕುಡುಗೋಲದಿಂದ ಹೊಡೆದು ಆಕೆಯ ಕೊಲೆಗೆ ಯತ್ನಿಸಿದ ಪತಿಗೆ ಇಲ್ಲಿನ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 3 ವರ್ಷ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದೆ.
ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮರಗುತ್ತಿ ಗ್ರಾಮದ ಮಹಾದೇವಪ್ಪ ತಂದೆ ಮಹಾರುದ್ರಪ್ಪ ಸಂಬಾಜಿ (52) ಶಿಕ್ಷೆಗೆ ಗುರಿಯಾದ ಆರೋಪಿ.
2022ರಲ್ಲಿ ಆರೋಪಿ ತನ್ನ ಹೊಲದಲ್ಲಿ ಬೆಳೆದ ತೊಗರಿಯನ್ನು ಅಡತಿಗೆ ಹಾಕಿ ಪಟ್ಟಿ ತೆಗೆದುಕೊಂಡು ಮದ್ಯಪಾನ ಮಾಡಿ ಮನೆಗೆ ಬಂದಾಗ ಪತ್ನಿ ಕುಡಿದು ಏಕೆ ದುಡ್ಡು ಹಾಳು ಮಾಡುತಿ, ಸಂಸಾರ ಅಡಚಣೆಗೆ ದುಡ್ಡು ಬೇಕು ಎಂದು ಹೇಳಿದಕ್ಕೆ ಆಕೆಯ ಜೊತೆಗೆ ಜಗಳ ತೆಗೆದು, ಅವಾಚ್ಯವಾಗಿ ಬೈಯ್ದು ಕುಡುಗೋಲದಿಂದ ಹೊಡೆದು ಕೊಲೆಗೆ ಯತ್ನಿಸಿದ್ದ. ಅಲ್ಲದೆ ಪತ್ನಿಯ ನಡತೆಯ ಬಗ್ಗೆ ಸಂಶಯ ಪಟ್ಟು ಈ ಹಿಂದೆ ಜಗಳ ಮಾಡುತ್ತ ಬಂದಿದ್ದ ಎನ್ನಲಾಗಿದೆ. ಈ ಸಂಬಂಧ ಕಮಾಲಾಪೂರ ಪೊಲೀಸ್ ಠಾಣೆಯ ಎಎಸ್‍ಐ ಭೀಮರಾಯ ಪಾಟೀಲ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎ.ವಿ.ಶ್ರೀನಾಥ ಅವರು, ಪ್ರಕರಣದ ವಿಚಾರಣೆ ನಡೆಸಿ ಆರೋಪಿ ಮಹಾದೇವಪ್ಪ ಸಂಬಾಜಿಗೆ 3 ವರ್ಷ ಶಿಕ್ಷೆ ಮತ್ತು 10 ಸಾವಿರ ರೂ.ದಂಡ ವಿಧಿಸಿದ್ದಾರೆ.
ಸರಕಾರದ ಪರವಾಗಿ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲದ ಸರಕಾರಿ ಅಭಿಯೋಜಕ ಎಸ್.ಆರ್.ನರಸಿಂಹಲು ಅವರು ವಾದ ಮಂಡಿಸಿದ್ದರು.






























