Home ಮುಖಪುಟ ಸುದ್ದಿ ಮಾಜಿ ಸಚಿವ ಬಿ.ಸಿ. ನಾಗೇಶ್ ನಿಧನಕ್ಕೆ ಗಣ್ಯರ ಸಂತಾಪ : ನಾಳೆ ತಿಪಟೂರಲ್ಲಿ ಅಂತ್ಯಕ್ರಿಯೆ

ಮಾಜಿ ಸಚಿವ ಬಿ.ಸಿ. ನಾಗೇಶ್ ನಿಧನಕ್ಕೆ ಗಣ್ಯರ ಸಂತಾಪ : ನಾಳೆ ತಿಪಟೂರಲ್ಲಿ ಅಂತ್ಯಕ್ರಿಯೆ

ಬೆಂಗಳೂರು, ಆ.೧೯-ಅನಾರೋಗ್ಯದಿಂದ ರಾತ್ರಿ ಬೆಂಗಳೂರಿನ ಜಯನಗರದಲ್ಲಿರುವ ಪುತ್ರಿ ನಿವಾಸದಲ್ಲಿ ನಿಧನರಾದ ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವರಾದ ಬಿ.ಸಿ. ನಾಗೇಶ್ (೬೭) ಅವರ ಅಂತ್ಯಕ್ರಿಯೆ ತಿಪಟೂರಿನಲ್ಲಿ ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.


ತಿಪಟೂರಿನಲ್ಲಿ ನಾಳೆ ಹಿಂದೂ ಬ್ರಾಹ್ಮಣ ಸಂಪ್ರದಾಯದಂತೆ ಮಾಜಿ ಸಚಿವ ಬಿ.ಸಿ. ನಾಗೇಶ್ ರವರ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ.


ಕಳೆದ ಒಂದು ವರ್ಷದಿಂದ ಮಾಜಿ ಸಚಿವ ಬಿ.ಸಿ. ನಾಗೇಶ್ ಅವರು ಅನಾರೋಗ್ಯಕ್ಕೆ ತುತ್ತಾಗಿ ಬೆಂಗಳೂರಿನ ತಮ್ಮ ಪುತ್ರಿ ನಿವಾಸದಲ್ಲೇ ಇದ್ದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಕೊನೆಯುಸಿರೆಳೆದಿದ್ದು, ಪತ್ನಿ ವೀಣಾ ನಾಗೇಶ್, ಪುತ್ರ ವಿಶ್ವದೀಪ್ ಹಾಗೂ ಪುತ್ರಿ ಶಾರದಾ ಸೇರಿದಂತೆ ಅಪಾರ ಬಂಧು ಬಳಗ, ಕಾರ್ಯಕರ್ತರನ್ನು ಅಗಲಿದ್ದಾರೆ.


ತಿಪಟೂರಿನ ಕೆ.ಆರ್.ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ಮಧ್ಯಾಹ್ನ ಪಾರ್ಥಿವ ಶರೀರದ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು.ಅಲ್ಲದೆ,


ಬೆಂಗಳೂರಿನಿಂದ ತಿಪಟೂರಿಗೆ ಪಾರ್ಥೀವ ಶರೀರ ಕೊಂಡೊಯ್ಯುವ ಮಾರ್ಗಮಧ್ಯೆ ತುಮಕೂರಿನ ಟೌನ್‌ಹಾಲ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಮಾಜಿ ಸಚಿವ ಬಿ.ಸಿ. ನಾಗೇಶ್ ರವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲಾಯಿತು.


ಶಾಸಕ ಜ್ಯೋತಿಗಣೇಶ್, ಜಿಲ್ಲಾ ಬಿಜೆಬಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಮಾಜಿ ಶಾಸಕ ಮಸಾಲ ಜಯರಾಮ್ ಸೇರಿದಂತ ಜಿಲ್ಲಾ ಬಿಜೆಪಿ ಮುಖಂಡರುಗಳು ನಾಗೇಶ್ ರವರ ಪಾರ್ಥೀವ ಶರೀರಕ್ಕೆ ಪುಷ್ಪಗುಚ್ಛವಿಟ್ಟು ಅಂತಿಮ ನಮನ ಸಲ್ಲಿಸಿದರು.


ಇದಕ್ಕೂ ಮುನ್ನ ಇಂದು ಬೆಳಿಗ್ಗೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಬಿ.ಸಿ. ನಾಗೇಶ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಈ ವೇಳೆ ಕಚೇರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ,ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ,ಶೋಭಾ ಕರದ್ಲಾಂಜೆ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು


ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ,ಬಿ.ಸಿ ನಾಗೇಶ್ ಹಲವು ವರ್ಷಗಳಿಂದ ನನಗೆ ಪರಿಚಿತರು.ಶಿಕ್ಷಣ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದ ಒಬ್ಬ ಪ್ರಾಮಾಣಿಕ ವ್ಯಕ್ತಿಯಾಗಿದ್ದರು.ಶಿಕ್ಷಣ ಕ್ಷೇತ್ರದಲ್ಲಿ ಶಿಸ್ತನ್ನು ತರಲು ದೊಡ್ಡ ಪ್ರಯತ್ನ ಮಾಡಿದ್ದರು. ಅವರಿಗೆ ಎಲ್ಲಾ ರೀತಿಯ ಸರ್ಕಾರಿ ಗೌರವಗಳನ್ನು ಒದಗಿಸುತ್ತೇವೆ. ನೊಣವಿನಕೆರೆ ಮಠದ ಎಲ್ಲಾ ಕಾರ್ಯಕ್ರಮಗಳಲ್ಲೂ ನನ್ನೊಂದಿಗೆ ಪಾಲ್ಗೊಂಡು, ನಮಗೆ ಸಹಕರಿಸಿದ್ದರು ಎಂದರು.


ಈ ದುಃಖದ ಸಂದರ್ಭದಲ್ಲಿ ಕುಟುಂಬಸ್ಥರು ಯಾರೂ ಧೈರ್ಯವನ್ನು ಕಳೆದುಕೊಳ್ಳಬಾರದು.ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ, ಬಂಧುಗಳಿಗೆ,ಅನುಯಾಯಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಡಿ.ಕೆ.ಶಿವಕುಮಾರ್ ಪ್ರಾರ್ಥಿಸಿದರು.


ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ನಾಗೇಶ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ನಾಗೇಶ್ ಅಜಾತಶತ್ರುವಾಗಿದ್ದರು. ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಅವರ ಅಗಲಿಕೆ ಬಿಜೆಪಿಗೆ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಎಂಎಲ್‌ಸಿ ಸಿ.ಟಿ ರವಿ ಕೂಡ ಮಾತನಾಡಿ,ಬಿ.ಸಿ. ನಾಗೇಶ್ ಅವರು ಮೃದು ಹೃದಯದ ವ್ಯಕ್ತಿ. ರಾಜಕೀಯ ಮೀರಿ ಜನಪ್ರೀತಿ ಸಂಪಾದಿಸಿದ್ದರು. ಒಬ್ಬ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ.ಶಾಸಕರಾಗುವ ಮುನ್ನವೇ ಎಬಿವಿಪಿಯಲ್ಲಿ ಸೇವೆ ಸಲ್ಲಿಸಿದ್ದ ನಾಗೇಶ್, ಕೊನೆಯವರೆಗೂ ಪಕ್ಷ ಹಾಗೂ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಿದ್ದಾರೆ.


ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ,ನಾಗೇಶ್ ಸರಳ, ಸಜ್ಜನ ಜೆಂಟಲ್‌ಮ್ಯಾನ್ ಇನ್ ಪಾಲಿಟಿಕ್ಸ್ ಎಂದು ಬಣ್ಣಿಸಿದ್ದಾರೆ.
ತಿಪಟೂರು ಕ್ಷೇತ್ರದ ಅಭಿವೃದ್ಧಿಗೆ ನಾಗೇಶ್ ಸಾಕಷ್ಟು ಶ್ರಮಿಸಿದ್ದರು. ನೀರಾವರಿ ಯೋಜನೆಗಳಿಗಾಗಿ ಹೆಚ್ಚಿನ ಕೆಲಸ ಮಾಡಿಸಿದ್ದರು. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಶಿಕ್ಷಣ ಸಚಿವರಾಗಿ ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಶ್ರಮಿಸಿದ್ದರು. ಒಬ್ಬ ಗೆಳೆಯನನ್ನು ಕಳೆದುಕೊಂಡಿದ್ದೇವೆ. ಬಿಜೆಪಿಗೆ, ರಾಜ್ಯಕ್ಕೆ ಹಾಗೂ ವೈಯಕ್ತಿಕವಾಗಿ ಇದು ನೋವಿನ ಸಂಗತಿ ಎಂದು ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.


ಎಬಿವಿಪಿಯಲ್ಲಿ ವಿದ್ಯಾರ್ಥಿ ಮುಖಂಡರಾಗಿ ಮತ್ತು ಆರ್‌ಎಸ್‌ಎಸ್ ಕಟ್ಟಾಳು ಆಗಿದ್ದ ಬಿ.ಸಿ. ನಾಗೇಶ್ ಅವರು ಇಂಜಿನಿಯರಿಂಗ್ ಪದವೀಧರರಾಗಿದ್ದರು. ೧೯೮೪ ರಲ್ಲಿ ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾಗಿ ಅಂದಿನಿಂದ ಪಕ್ಷದ ಸಂಘಟನೆಗೆ ಒತ್ತು ನೀಡಿದ್ದರು.


ಬಿಜೆಪಿ ಸೇರ್ಪಡೆಗೊಂಡು ನಂತರ ಬಿ.ಸಿ. ನಾಗೇಶ್ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಕೇಂದ್ರ ಸಚಿವ ಅನಂತಕುಮಾರ್, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಆರ್‌ಎಸ್‌ಎಸ್‌ನ ರಾಷ್ಟ್ರೀಯ ಸಹಕಾರ್ಯನಿರ್ವಾಹಕ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರಿಗೆ ಅತ್ಯಾಪ್ತರಾಗಿದ್ದರು. ಜತೆಗೆ ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ ರವರೊಂದಿಗೂ ನಿಕಟ ಸಂಪರ್ಕ ಹೊಂದಿದ್ದರು.


೧೯೮೪ ರಲ್ಲಿ ಬಿಜೆಪಿ ಪಕ್ಷ ಸೇರಿದ್ದರೂ ಸಹ ೨೦೦೪ರ ವರೆಗೂ ವಿಧಾನಸಭಾ ಚುನಾವಣೆಗೆ ಬಿ.ಸಿ. ನಾಗೇಶ್ ಅವರು ಸ್ಪರ್ಧೆಸಿರಲಿಲ್ಲ. ಅಲ್ಲಿಯವರೆಗೂ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ೨೦೦೪ ರಲ್ಲಿ ಪ್ರಥಮ ಬಾರಿಗೆ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದಾದ ಬಳಿಕೂ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು.


೨೦೦೮ ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ೨೦೧೮ರಲ್ಲೂ ಸಹ ಶಾಸಕರಾಗಿ ಆಯ್ಕೆಯಾಗಿದ್ದ ಬಿ.ಸಿ. ನಾಗೇಶ್ ಅವರು ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇವರ ತಂದೆ ಬಿ.ಹೆಚ್. ಚಂದ್ರಶೇಖರಯ್ಯ ಅವರು ಸಹ ಶಾಸಕರಾಗಿ ಕಾರ್ಯನಿರ್ವಹಿಸಿದ್ದನ್ನು ಸ್ಮರಿಸಬಹುದಾಗಿದೆ.