Home ಮುಖಪುಟ ಸುದ್ದಿ ದೇಶದಲ್ಲಿ ನಕಲಿ ಔಷಧ ಹಾವಳಿ: ಹಲವು ರಾಜ್ಯಗಳಿಗೆ ವ್ಯಾಪಿಸಿದ ಜಾಲ

ದೇಶದಲ್ಲಿ ನಕಲಿ ಔಷಧ ಹಾವಳಿ: ಹಲವು ರಾಜ್ಯಗಳಿಗೆ ವ್ಯಾಪಿಸಿದ ಜಾಲ

ಬೆಂಗಳೂರು,ಆ. ೨೦-ತಾವರಕೆರೆಯ ದೊಡ್ಡೇರಿ ಬಳಿ ಪತ್ತೆಯಾದ ನಕಲಿ ಔಷಧ ದಂಧೆಯ ಜಾಲ ದೇಶದ ಹಲವು ರಾಜ್ಯಗಳಿಗೆ ವಿಸ್ತರಿಸಿರುವ ಶಂಕೆ ವ್ಯಕ್ತವಾಗಿದೆ.

ಕರ್ನಾಟಕದ ಔಷಧ ನಿಯಂತ್ರಣ ಇಲಾಖೆ ನೀಡಿದ ಮಾಹಿತಿಯ ಆಧಾರದ ಮೇಲೆ ದೇಶದ ಎಲ್ಲ ರಾಜ್ಯಗಳ ಔಷಧ ನಿಯಂತ್ರಕರು ಹಾಗೂ ರಾಜ್ಯ ಪರವಾನಗಿ ಪ್ರಾಧಿಕಾರಗಳಿಗೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಿಂದ ಮುಂಬೈ, ತೆಲಂಗಾಣ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ನಡುವೆ ನಕಲಿ ಔಷಧ ಜಾಲದ ನಂಟು ಇರುವ ಸಾಧ್ಯತೆ ಇದೆ ಎನ್ನುವ ಅನುಮಾನ ವ್ಯಕ್ತವಾಗಿದೆ.


ಕರ್ನಾಟಕದ ಔಷಧ ಜಾಗೃತ ದಳ ಆಗಸ್ಟ್ ೧೮ರಂದು ಬಿದದಿ ಸಮೀಪದ ನಂ.೩೪ ಕುರುಬರಹಳ್ಳಿ ಗ್ರಾಮದಲ್ಲಿ ಅನುಮತಿ ಇಲ್ಲದ ಔಷಧ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿತ್ತು. ಈ ವೇಳೆ ನಕಲಿ ಔಷಧಗಳು, ಬಲ್ಕ್ ಸ್ಟಾಕ್, ಪ್ಯಾಕೇಜಿಂಗ್ ಯಂತ್ರಗಳು, ಖಾಲಿ ವಯಲ್‌ಗಳು ಹಾಗೂ ನಕಲಿ ಲೇಬಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ವಸ್ತುಗಳ ಒಟ್ಟು ಅಂದಾಜು ಮೌಲ್ಯ ೫,೦೫,೪೯,೫೭೫ ರೂ. ಎಂದು ತಿಳಿದುಬಂದಿದೆ.


ಎಲ್ಲ ರಾಜ್ಯಗಳಿಗೆ ಅಲರ್ಟ್:


ಈ ಪ್ರಕರಣ ಅಂತರರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಂಕೆ ಹಿನ್ನೆಲೆಯಲ್ಲಿ ಕರ್ನಾಟಕದ ಔಷಧ ಗುಣಮಟ್ಟ ಇಲಾಖೆ ದೇಶದ ಎಲ್ಲ ರಾಜ್ಯಗಳ ಔಷಧ ನಿಯಂತ್ರಕರಿಗೆ ಪತ್ರ ಬರೆದಿದೆ. ತಮ್ಮ ರಾಜ್ಯದಲ್ಲೂ ಅನುಮಾನಾಸ್ಪದ ಲೇಬಲಿಂಗ್ ಹೊಂದಿರುವ ಔಷಧಗಳು ಅಥವಾ ಕರ್ನಾಟಕದಲ್ಲಿ ಬ್ಯಾನ್ ಮಾಡಿರುವ ಬ್ಯಾಚ್‌ಗಳ ಔಷಧಗಳು ಪತ್ತೆಯಾದರೆ ತಕ್ಷಣ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.


ರಾಜ್ಯದ ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್‌ಗಳು ಹಾಗೂ ಔಷಧ ವಿತರಕರಿಗೂ ಎಚ್ಚರಿಕೆ ನೀಡಲಾಗಿದ್ದು, ನಿಷೇಧ ಮಾಡಿರುವ ಬ್ಯಾಚ್‌ಗಳ ಔಷಧಗಳು ಬಳಕೆಯಾಗುತ್ತಿವೆಯೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.

ಮುಂಬೈವರೆಗೂ ನಂಟು:


ಅಪರ ಔಷಧ ನಿಯಂತ್ರಕ ಡಾ. ಉಮೇಶ್ ನೀಡಿರುವ ಮಾಹಿತಿಯ ಪ್ರಕಾರ, ಪ್ರಮುಖ ಹೋಲ್‌ಸೇಲ್ ಔಷಧ ಮಾರುಕಟ್ಟೆ, ಡಿಸ್ಟ್ರಿಬ್ಯೂಷನ್ ಹಬ್ ಮತ್ತು ರಿಟೇಲ್ ಮೆಡಿಕಲ್ ಶಾಪ್‌ಗಳಲ್ಲಿ ದಿಢೀರ್ ತಪಾಸಣೆ ನಡೆಸುವಂತೆ ಬೇರೆ ರಾಜ್ಯಗಳಿಗೆ ಸೂಚಿಸಲಾಗಿದೆ.


ವಿಶೇಷವಾಗಿ Pಜಿizeಡಿ ಹೆಸರಿನಲ್ಲಿ ಅನುಮಾನಾಸ್ಪದ ಅಥವಾ ದಾಖಲೆಗಳಿಲ್ಲದ ಔಷಧ ಸ್ಟಾಕ್ ಇದೆಯೇ ಎಂಬುದನ್ನು ಪರಿಶೀಲಿಸಲು ಸೂಚಿಸಲಾಗಿದೆ. ದುಬಾರಿ ಔಷಧಗಳನ್ನು ಮಾರಾಟ ಮಾಡುವ ಡಿಸ್ಟ್ರಿಬ್ಯೂಟರ್‌ಗಳ ಔಷಧ ಖರೀದಿ ಮಾರಾಟ ಮತ್ತು ಔಷಧದ ಮೂಲದ ದಾಖಲೆಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ.


ಕಡಿಮೆ ಬೆಲೆಗೆ ಔಷಧ:


ತೆಲಂಗಾಣ, ಹಿಮಾಚಲ ಪ್ರದೇಶದಿಂದ ಬರುತ್ತಿತ್ತು ಕಡಿಮೆ ಬೆಲೆ ಔಷಧ
ತೆಲಂಗಾಣ ಮತ್ತು ಹಿಮಾಚಲ ಪ್ರದೇಶದ ಮ್ಯಾನುಫ್ಯಾಕ್ಚರಿಂಗ್ ಹಬ್‌ಗಳಿಂದ ಕಡಿಮೆ ಬೆಲೆಯ ಜೆನೆರಿಕ್ ಔಷಧಗಳನ್ನು ಪಡೆದು, ಅವುಗಳನ್ನು ಕರ್ನಾಟಕದ ಲೈಸೆನ್ಸ್ ಇಲ್ಲದ ಘಟಕದಲ್ಲಿ ಹೊಸ ವಯಲ್‌ಗಳಿಗೆ ತುಂಬಿ, ನಕಲಿ ಲೇಬಲ್ ಅಂಟಿಸಿ ದುಬಾರಿ ಆಮದು ಔಷಧಗಳಂತೆ ಮಾರಾಟ ಮಾಡಲಾಗುತ್ತಿತ್ತೆಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ದುಬಾರಿ ಔಷಧಗಳೇ ಗುರಿ !


ಈ ಜಾಲದಲ್ಲಿ ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ಹೈ-ವ್ಯಾಲ್ಯೂ ಇಂಜೆಕ್ಷನ್‌ಗಳೂ ಗುರಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ನಕಲಿ ಔಷಧಗಳು ರೋಗಿಗಳ ಜೀವಕ್ಕೆ ನೇರ ಅಪಾಯ ಉಂಟುಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳು ಮತ್ತು ವೈದ್ಯರಿಗೆ ವಿಶೇಷ ಎಚ್ಚರಿಕೆ ನೀಡಲಾಗಿದೆ.
ಆಂಕಾಲಜಿಸ್ಟ್‌ಗಳು, ವೈದ್ಯರು ಮತ್ತು ಫಾರ್ಮಸಿಗಳು ದುಬಾರಿ ಆಮದು ಔಷಧಗಳ ಪ್ಯಾಕೇಜಿಂಗ್‌ನ ಪರಿಶೀಲಿಸುವಂತೆ ಸೂಚಿಸಲಾಗಿದೆ. ಅನುಮಾನಾಸ್ಪದ ಪ್ಯಾಕೇಜಿಂಗ್, ಬ್ಯಾಚ್ ದಾಖಲೆಗಳ ಕೊರತೆ ಅಥವಾ ಅನುಮಾನಾಸ್ಪದ ಮೂಲದ ಸ್ಟಾಕ್ ಕಂಡುಬಂದರೆ ತಕ್ಷಣ ವಶಪಡಿಸಿಕೊಳ್ಳುವಂತೆ ನಿರ್ದೇಶಿಸಲಾಗಿದೆ.
ಇದರಿಂದ ಔಷಧಗಳನ್ನು ನಕಲಿಯಾಗಿ ತಯಾರಿಸುವುದಷ್ಟೇ ಅಲ್ಲದೆ, ಅವುಗಳಿಗೆ ನಕಲಿ ಪ್ಯಾಕೇಜಿಂಗ್ ಮತ್ತು ಲೇಬಲಿಂಗ್ ಮಾಡುವ ವ್ಯವಸ್ಥೆಯೂ ಘಟಕದಲ್ಲಿ ಇತ್ತು ಎಂಬ ಅನುಮಾನ ಬಲಗೊಂಡಿದೆ.


ತಪಾಸಣೆಗೆ ಸೂಚನೆ:


ಪ್ರಕರಣದ ತನಿಖೆ ಮುಂದುವರಿದಿರುವ ಬೆನ್ನಲ್ಲೇ ದೇಶದ ವಿವಿಧ ರಾಜ್ಯಗಳಲ್ಲಿ ಮಾರುಕಟ್ಟೆ ತಪಾಸಣೆ ನಡೆಸಿ, ಅದರ ವರದಿ ಹಾಗೂ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವಂತೆ ಸೂಚಿಸಲಾಗಿದೆ. ಇದರ ಮೂಲಕ ನಕಲಿ ಔಷಧ ಜಾಲದ ಸಂಪೂರ್ಣ ಸಂಪರ್ಕವನ್ನು ಪತ್ತೆಹಚ್ಚಲು ಸಮನ್ವಯಿತ ಕಾರ್ಯಾಚರಣೆ ನಡೆಸಲು ಔಷಧ ನಿಯಂತ್ರಣ ಇಲಾಖೆ ಮುಂದಾಗಿದೆ.

ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ: ಖಾದರ್


ರಾಜ್ಯದಲ್ಲಿ ಪತ್ತೆಯಾಗಿರುವ ನಕಲಿ ಔಷಧ ಜಾಲ ಅಂತಾರಾಜ್ಯ ಮಟ್ಟದಲ್ಲಿದ್ದು, ಈ ಜಾಲವನ್ನು ಪತ್ತೆ ಹಚ್ಚುವ ಸಂಬಂಧ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿರುವುದಾಗಿ ರಾಜ್ಯದ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.


ವಿಧಾನಸೌಧದಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ನಮ್ಮ ರಾಜ್ಯದಲ್ಲಷ್ಟೇ ಅಲ್ಲ ಬೇರೆ ರಾಜ್ಯದಲ್ಲೂ ಎಲ್ಲೆಲ್ಲಿ ಈ ನಕಲಿ ಜಾಗ ಇದೆಯೋ ಅದನ್ನು ಪತ್ತೆ ಹಚ್ಚಬೇಕು. ಹಾಗಾಗಿ ಈ ಸಂಬಂಧ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದೇನೆ. ಸಂಬಂಧಪಟ್ಟ ಕೆಲ ರಾಜ್ಯದ ಆರೋಗ್ಯ ಸಚಿವರಿಗೂ ಪತ್ರ ಬರೆದಿದ್ದೇನೆ ಎಂದರು.


ನಕಲಿ ಔಷಧ ಜಾಲ ತಯಾರಿಸುವ ಕಾರ್ಖಾನೆಗಳ ಮೇಲೆ ಕೇಂದ್ರ ಸರ್ಕಾರವೇ ಕ್ರಮ ಜರುಗಿಸಬೇಕು. ಹಾಗಾಗಿ ಈ ಪತ್ರ ಬರೆದಿರುವುದಾಗಿ ಹೇಳಿದರು.
ರಾಜ್ಯದಲ್ಲಿ ನಕಲಿ ಔಷಧ ಜಾಲ ಪತ್ತೆ, ತನಿಖೆ ಎಲ್ಲದಕ್ಕೂ ಒಂದು ಎಸ್‌ಐಟಿ ರಚನೆ ಮಾಡಲಾಗುತ್ತದೆ ಎಂದು ಹೇಳಿದರು.


ಈ ನಕಲಿ ಔಷಧ ಜಾಲ ಪತ್ತೆಗೆ ಜನರ ಸಹಕಾರವು ಮುಖ್ಯ. ನಮ್ಮ ಇಲಾಖೆಯಲ್ಲಿರುವ ಸಿಬ್ಬಂದಿಗಳಿಂದ ನಕಲಿ ಔಷಧ ಜಾಲಪತ್ತೆ ಹಚ್ಚುವುದು ಕಷ್ಟ ಸಾಧ್ಯ. ಹಾಗಾಗಿ ಜನ ಮಾಹಿತಿ ನೀಡಿದರೆ ನಕಲಿ ಔಷಧ ಜಾಲವನ್ನು ಮಟ್ಟ ಹಾಕಬಹುದಾಗಿದೆ ಎಂದು ಹೇಳಿದರು.


ಈಗ ನಕಲಿ ಔಷಧ ಜಾಲದಲ್ಲಿ ಯಾರ್ಯಾರೂ ಇದ್ದಾರೋ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಅವರು ಹೇಳಿದರು.
ಸದ್ಯಕ್ಕೆ ಆರು ಕಂಪನಿಗಳನ್ನು ಲೇಬಲ್ ಮಾಡಲಾಗಿದೆ ಎಂದರು.


ಹಿಂದಿನ ಆರೋಗ್ಯ ಸಚಿವರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರೂ ಸಹ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅದನ್ನು ನಾನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ ಎಂದು ಸಚಿವ ಖಾದರ್ ಹೇಳಿದರು.