Home ಮುಖಪುಟ ಸುದ್ದಿ ತಾಕತ್ತಿದ್ದರೆ ಆರ್‌ಎಸ್‌ಎಸ್ ಶಾಖೆಯಲ್ಲಿ ರಾಷ್ಟ್ರಗೀತೆ ಹಾಡಲಿ

ತಾಕತ್ತಿದ್ದರೆ ಆರ್‌ಎಸ್‌ಎಸ್ ಶಾಖೆಯಲ್ಲಿ ರಾಷ್ಟ್ರಗೀತೆ ಹಾಡಲಿ

ಬೆಂಗಳೂರು,ಆ. ೨೦: ದೇಶಭಕ್ತಿ ಮತ್ತು ’ವಂದೇ ಮಾತರಂ’ ವಿಷಯವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಾಯಕರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಗೆ ತಾಕತ್ತಿದ್ದರೆ ತಮ್ಮ ಆರ್‌ಎಸ್‌ಎಸ್ ಶಾಖೆಗಳಲ್ಲಿ ಸಂಘ ಗೀತೆ ಬಿಟ್ಟು ರಾಷ್ಟ್ರಗೀತೆ ’ಜನಗಣಮನ’ ಹಾಡಲಿ ಎಂದು ಸವಾಲು ಎಸೆದಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಡಬ್ಲ್ಯೂಸಿ ಕೈಗೊಂಡಿರುವ ನಿರ್ಧಾರವನ್ನು ಸಂಪೂರ್ಣವಾಗಿ ಸ್ವಾಗತಿಸುವುದಾಗಿ ತಿಳಿಸಿದರು.

“ನಮ್ಮನ್ನು ಜೈಲಿಗೆ ಹಾಕಲಿ, ನೇಣಿಗೆ ಹಾಕಲಿ ಅಥವಾ ಗಲ್ಲಿಗೇರಿಸಲಿ, ಕಾಂಗ್ರೆಸ್ ಪದ್ಧತಿಯಂತೆ ನಾವು ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುತ್ತೇವೆ” ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದರು. ರಾಷ್ಟ್ರಪ್ರೇಮದ ಹೆಸರಿನಲ್ಲಿ ಧ್ರುವೀಕರಣ ಮಾಡುವವರೇ ನಿಜವಾದ ದೇಶದ್ರೋಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರನ್ನು ಕಟುವಾಗಿ ಟೀಕಿಸಿದ ಅವರು, “ಬಿಜೆಪಿಯವರು ಕಂಗನಾ ರಣಾವತ್ ಅವರ ಅಭಿಮಾನಿಗಳು. ಚಡ್ಡಿ ಹಾಕುವ ಈ ನಾಯಕರಿಗೆ ಸಂಸತ್ತಿಗೆ ಬಂದು ಚರ್ಚೆ ಮಾಡುವ ಧೈರ್ಯವಿಲ್ಲದ ನರಹೇಡಿಗಳು. ಬೇಕಿದ್ದರೆ ಅವರು ಕಂಗನಾ ಅವರ ಹಾಡನ್ನೇ ಸಂಸತ್ತಿಗೆ ತಂದು ರಾಷ್ಟ್ರಗೀತೆ ಎಂದು ಘೋಷಿಸಲಿ” ಎಂದು ವ್ಯಂಗ್ಯವಾಡಿದರು.

ವಿಪಕ್ಷಗಳ ನಡೆಗೆ ಆಕ್ರೋಶ:ವಿರೋಧ ಪಕ್ಷಗಳು ಸದನ ನಡೆಯಲು ಬಿಡುತ್ತಿಲ್ಲ ಎಂದು ಆರೋಪಿಸಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಜಾಗವನ್ನು ಸ್ವಚ್ಛಗೊಳಿಸಿದ ಘಟನೆಯನ್ನು ಸ್ಮರಿಸಿ, ಬಿಜೆಪಿಗರಿಗೆ ಪರಿಶಿಷ್ಟ ಜಾತಿ (ಎಸ್.ಸಿ) ಹಾಗೂ ವಾಲ್ಮೀಕಿ ಸಮುದಾಯದ ನಾಯಕರನ್ನು ಕಂಡರೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಮಾಜಿ ಸಚಿವ ನಾಗೇಂದ್ರ ಅವರು ವಾಲ್ಮೀಕಿ ಸಮುದಾಯಕ್ಕೆ ಸೇರಿದವರೆಂಬ ಕಾರಣಕ್ಕೇ ಅವರ ವಿರುದ್ಧ ಹರಿಹಾಯುತ್ತಿದ್ದಾರೆ ಎಂದು ಆರೋಪಿಸಿದರು.ನಿಯಮಾವಳಿಗಳ ಪ್ರಕಾರ ನೋಟೀಸ್ ನೀಡಿ ಸದನದಲ್ಲಿ ನೇರ ಚರ್ಚೆಗೆ ಬರಲಿ ಎಂದು ಹರಿಪ್ರಸಾದ್ ಬಿಜೆಪಿಗೆ ಸವಾಲು ಹಾಕಿದರು.