
ರಾಯಚೂರು,ಅ.8: ಈ ವರ್ಷ ತೀವ್ರ ಬರಗಾಲದ ಪರಿಸ್ಥಿತಿಯನ್ನು ರಾಯಚೂರು ಜಿಲ್ಲೆಯಲ್ಲಿ ಎದುರಿಸಲಾಗುತ್ತಿದ್ದು, ನಮ್ಮ ಸರ್ಕಾರ ರೈತರ ಸಂಕಷ್ಟದಲ್ಲಿ ಭಾಗಿಯಾಗಿ ಅವರಿಗೆÀ ಅಗತ್ಯ ನೆರವು ನೀಡುವ ಕೆಲಸ ಮಾಡುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಅಜಯ್ ಧರ್ಮಸಿಂಗ್ ಅವರು ಹೇಳಿದರು.
ಅಕ್ಟೋಬರ್ 07ರ ಬುಧವಾರ ದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರಾಯಚೂರು ಜಿಲ್ಲೆಯಲ್ಲಿ ಬರ ಪರಿಸ್ಥಿತಿ, ಮುಂದಿನ ಬೇಸಿಗೆಯವರೆಗೆ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೀರಿನ ಕಾಯ್ದಿರಿಸುವುದು, ಕೃಷಿ ಚಟುವಟಿಕೆಗಳು, ನೀರಾವರಿ ಸಮಸ್ಯೆಗಳು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ಶಾಸಕರು ತಮ್ಮ ತಮ್ಮ ತಾಲೂಕಿನ ಸಮಸ್ಯೆಗಳ ಬಗ್ಗೆ ಸಲಹೆ ನೀಡಿದ್ದು, ಸರ್ಕಾರವು ರೈತರ ಹಿತ ಕಾಯಲು ಸುಮಾರು 1,550 ಕೋಟಿ ರೂ. ರಾಜ್ಯದಲ್ಲಿ ಘೋಷಿಸಿದ್ದು, ನೇರವಾಗಿ ಇನ್ಪುಟ್ ಸಬ್ಸಿಡಿ ಮುಖಾಂತರ ಪ್ರತಿ ರೈತರಿಗೆ 2500 ರೂ. ನೀಡುವ ಕೆಲಸ ಮಾಡಲಾಗುತ್ತಿದೆ. ಇದರ ಜೊತೆಗೆ ಕುಡಿಯುವ ನೀರಿನ ಬರಗಾಲ ಪರಿಸ್ಥಿತಿಯನ್ನು ಎದುರಿಸಲು ರಾಜ್ಯಮಟ್ಟದಲ್ಲಿ ಸುಮಾರು 300 ಕೋಟಿ ರೂ. ನೀಡಲಾಗಿದ್ದು, ರಾಯಚೂರು ಜಿಲ್ಲೆಗೆ ಮೊದಲನೇ ಕಂತಿನಲ್ಲಿ 6 ಕೋಟಿ ಹಾಗೂ ಎರಡನೇ ಕಂತಿನಲ್ಲಿ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಕೇಂದ್ರ ಸರ್ಕಾರದ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯದಲ್ಲಿ ಒಟ್ಟು 201 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕೆಲವು ಕಡೆಗಳಲ್ಲಿ ಮಾನಿಟರಿಂಗ್ ಹಾಗೂ ಇನ್ನು ಕೆಲವು ಕಡೆಗಳಲ್ಲಿ ಸಿವಿಯರ್ ಆಗಿ ಪರಿಗಣಿಸಿ ಮಾರ್ಗಸೂಚಿಗಳನ್ವಯ ಕ್ರಮ ಕೈಗೊಳ್ಳಲಾಗಿದೆ. ರಾಯಚೂರು ಜಿಲ್ಲಾ ಉಸ್ತುವಾರಿಯಾಗಿ ಕೆಲದಿನಗಳ ಹಿಂದೆ ನೇಮಕಗೊಂಡ ನಂತರ, ಪ್ರಜಾಸೇವೆ, ಬರ ವೀಕ್ಷಣೆ, ಸ್ವಾತಂತ್ರ್ಯೋತ್ಸವ ಹಾಗೂ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಸೇರಿದಂತೆ ವಿವಿಧ ಹಂತಗಳಲ್ಲಿ ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ವಿವಿಧ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದರು.
ಅಧಿಕಾರಿಗಳು ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಖುದ್ದಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಗತ್ಯವಿರುವ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಬರಗಾಲದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ, ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು.
ಶ್ರೀಘ್ರ ಐಸಿಸಿ ಸಭೆ ಆಯೋಜನೆ: ಬರಗಾಲದ ಹಿನ್ನಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಮರ್ಪಕ ನೀರು ಒದಗಿಸುವ ಕುರಿತು ಚರ್ಚಿಸಲು ಮತ್ತು ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಕೂಡಲೇ ಐಸಿಸಿ ಸಭೆಯನ್ನು ಕರೆಯುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರು ಹಾಗೂ ಐಸಿಸಿ ಸಮಿತಿಯ ಅಧ್ಯಕ್ಷರಾದ ಶಿವರಾಜ ತಂಡಗಿ ಅವರಿಗೆ ಪತ್ರ ಬರೆಯುವ ಮೂಲಕ ಶ್ರೀಘ್ರವೇ ಐಸಿಸಿ ಸಭೆಯನ್ನು ಆಯೋಜನೆ ಮಾಡುವಂತೆ ತಿಳಿಸಲಾಗುವುದು ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಅಜಯ್ ಧರ್ಮಸಿಂಗ್ ಅವರು ತಿಳಿಸಿದರು.
ಕುಡಿಯುವ ನೀರಿಗೆ ಪ್ರಥಮ ಆದ್ಯತೆ: ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಸ್ಪಷ್ಟ ನಿರ್ದೇಶನದಂತೆ ಈ ಬರಗಾಲದ ಸಂದರ್ಭದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಿದೆ. ನವೆಂಬರ್ 10ರ ಗಡುಳಿನೊಳಗೆ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಸುಧಾರಿಸದಿದ್ದರೆ ಎದುರಾಗುವ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ರಾಯಚೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಿಗದಿತ ಅಡಿಗಳವರೆಗೆ ನೀರು ಲಭ್ಯವಿರಬೇಕಿದೆ. ನೀರಾವರಿ ಇಲಾಖೆಯು ಬಿಡುಗಡೆ ಮಾಡುವ ನೀರಿನ ಪ್ರಮಾಣಕ್ಕೂ ಮತ್ತು ವಾಸ್ತವವಾಗಿ ಆಗಬೇಕಿರುವ ಅಗತ್ಯತೆಗೂ ಸಮನ್ವಯತೆ ಇರಬೇಕು. ಜಿಲ್ಲಾಡಳಿತ, ಪೆÇಲೀಸ್ ಇಲಾಖೆ, ನೀರಾವರಿ ಇಲಾಖೆ ಹಾಗೂ ಆಡಳಿತ ಮತ್ತು ವಿರೋಧ ಪಕ್ಷದ ಎಲ್ಲ ಜನಪ್ರತಿನಿಧಿಗಳು ಒಟ್ಟಾಗಿ ಈ ಬರಗಾಲವನ್ನು ಸಮರ್ಥವಾಗಿ ಎದುರಿಸಲು ಕೈಜೋಡಿಸಬೇಕಿದೆ. ಜಿಲ್ಲೆಯಾದ್ಯಂತ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಆಡಳಿತ ಯಂತ್ರವು ಸಜ್ಜಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಈ ವೇಳೆ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಮಾತನಾಡಿ, ರೈತರ ಬೋರ್‍ವೆಲ್‍ಗಳು ಬತ್ತಿಹೋಗುತ್ತಿವೆ. ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಕ್ರಿಟಿಕಲ್ ಗ್ರಾಮಗಳನ್ನು ಗುರುತಿಸಿ ಪಟ್ಟಿ ಮಾಡಬೇಕು. ಮೊದಲೇ ಪಟ್ಟಿ ಸಿದ್ಧಪಡಿಸಿದರೆ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗುತ್ತದೆ. ಬೋರ್‍ವೆಲ್ ಹಾಗೂ ಟ್ಯಾಂಕರ್‍ಗಳನ್ನು ಬಾಡಿಗೆಗೆ ಪಡೆಯಲು ಈಗಿನಿಂದಲೇ ಕ್ರಮ ಕೈಗೊಳ್ಳಬೇಕು ಎಂದರು.
ಈ ವೇಳೆ ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ್ ಎಸ್.ಪಾಟೀಲ್ ಅವರು ಮಾತನಾಡಿ, ಡ್ಯಾಂ ಗೇಟ್ ತೆರೆದು ಎಷ್ಟು ದಿನಗಳಾಗಿವೆ. 104 ಮೈಲ್‍ಗೆ ಎಷ್ಟು ನೀರು ನೀಡಲಾಗಿದೆ. ಹಾಗೂ 69 ಮೈಲ್‍ಗೆ ಎಷ್ಟು ನೀರು ಹರಿಸಲಾಗಿದೆ ಎಂಬ ಮಾಹಿತಿಯನ್ನು ನೀಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.
ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ಮಾತನಾಡಿ, ಮುಂದಿನ ಕ್ರಿಯಾಯೋಜನೆ ರೂಪಿಸುವಾಗ ಪಂಚಾಯತಿವಾರು ಸಮಸ್ಯೆಗಳ ಪಟ್ಟಿಯನ್ನು ಸಿದ್ದಪಡಿಸಬೇಕು. ಪ್ರತಿ ಗ್ರಾಮದಲ್ಲಿ ಜನಸಂಖ್ಯೆ ಎಷ್ಟು, ಎಷ್ಟು ಪ್ರಮಾಣದ ನೀರು ಅಗತ್ಯವಿದೆ ಹಾಗೂ ಎಷ್ಟು ಬೋರ್‍ವೆಲ್‍ಗಳ ಅವಶ್ಯಕತೆ ಇದೆ ಎಂಬುದರ ಕುರಿತು ಸಮಗ್ರ ಮಾಹಿತಿ ಪಡೆಯಬೇಕು. ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ತಿಳಿಸಬೇಕೆಂದು ಹೇಳಿದರು.
ಮಸ್ಕಿ ಶಾಸಕ ಬಸನಗೌಡ ತುರವಿಹಾಳ್ ಮಾತನಾಡಿ, ಕಳೆದ ಒಂದು ವರ್ಷದಿಂದ ಜಲಮೂಲ ಇಲ್ಲ ಎಂದು ಹೇಳಲಾಗುತ್ತಿದೆ. ಬಾಡಿಗೆ ಬೋರ್‍ವೆಲ್ ಮೂಲಕ ನೀರು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ವಾಸ್ತವ ಸ್ಥಿತಿ ಬೇರೆ ಇದೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಆಗಿರುವ ಮಸ್ಕಿ ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರ್ವಿಹಾಳ ಅವರು ಮಾತನಾಡಿ, ಮಸ್ಕಿ ಶಾಸಕ ಬಸನಗೌಡ ತುರವಿಹಾಳ್ ಮಾತನಾಡಿ, ಕಳೆದ ಒಂದು ವರ್ಷದಿಂದ ಜಲಮೂಲ ಇಲ್ಲ ಎಂದು ಹೇಳಲಾಗುತ್ತಿದೆ. ಬಾಡಿಗೆ ಬೋರ್‍ವೆಲ್ ಮೂಲಕ ನೀರು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ವಾಸ್ತವ ಸ್ಥಿತಿ ಬೇರೆ ಇದೆ ಎಂದರು.
ಇದೇ ಸಂದರ್ಭದಲ್ಲಿ ಮಾನವಿ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯ ನಾಯಕ, ಲಿಂಗಸಗೂರು ಕ್ಷೇತ್ರದ ಶಾಸಕರಾದ ಮಾನಪ್ಪ ಡಿ.ವಜ್ಜಲ್, ದೇವದುರ್ಗ ಕ್ಷೇತ್ರದ ಶಾಸಕರಾದ ಕರೆಮ್ಮ ಜಿ.ನಾಯಕ, ವಿಧಾನ ಪರಿಷತ್ ಶಾಸಕರಾದ ಎನ್.ಎಸ್.ಬೋಸರಾಜು, ಬಸನಗೌಡ ಬಾದರ್ಲಿ, ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ., ಸಹಾಯಕ ಆಯುಕ್ತ ನಾಗೇಂದ್ರ ಬಾಬು ಕುಮಾರ್, ಡಾ.ಹಂಪಣ್ಣ ಸಜ್ಜನ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ತಾಲೂಕಿನ ತಹಶೀಲ್ದಾರರು, ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು























