
ಕಲಬುರಗಿ: ಜು.3:ಶಾಸಕಾಂಗ, ಕಾಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿ, ಅವುಗಳ ಬಗ್ಗೆ ಜನರಿಗೆ ಮಾಹಿತಿ ಮುಟ್ಟಿಸುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪತ್ರಿಕಾ ರಂಗ ಅಪಾರವಾದ ಕೊಡುಗೆಯನ್ನು ನೀಡುತ್ತಿದೆ. ಸಾಮಾನ್ಯವಾಗಿ ಪತ್ರಿಕಾ ರಂಗಕ್ಕೆ ನಾಲ್ಕನೇ ಅಂಗವೆಂದು ಕರೆಯಲಾಗುತ್ತದೆ. ಆದರೆ ಸಂವಿಧಾನ ಮತ್ತು ಕಾನೂನಾತ್ಮಕವಾಗಿ ನಾಲ್ಕನೇ ಅಂಗದ ಸ್ತಾನಮಾನ ದೊರೆಯಬೇಕು ಎಂದು ರಾಜ್ಯ ಮಾಧ್ಯಮ ಅಕಾಡೆಮಿಯ ಮಾಜಿ ಸದಸ್ಯ ದೇವೇಂದ್ರಪ್ಪ ಕಪನೂರ ಆಶಯ ವ್ಯಕ್ತಪಡಿಸಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿನ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಸಂಜೆ ಏರ್ಪಡಿಸಲಾಗಿದ್ದ “ಕನ್ನಡ ಪತ್ರಿಕಾ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ್ ಮಾತನಾಡಿ, ಪತ್ರಿಕೆಗಳು ಸಮಾಜದ ಕನ್ನಡಿಯಿದ್ದಂತೆ. ಜ್ಞಾನದ ಕಣಜ. ವಿದ್ಯಾರ್ಥಿ ದಿಸೆಯಿಂದಲೇ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು. ಇದರಿಂದ ಎಲ್ಲಾ ವಿಷಯಗಳ ಬಗ್ಗೆ ಜ್ಞಾನ ದೊರೆತು, ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗುತ್ತದೆ. ಜೊತೆಗೆ ಶಬ್ದ ಭಂಡಾರ, ಭಾಷಾ ಕೌಶಲ ವೃದ್ಧಿಯಾಗುತ್ತದೆ. ಪ್ರಜಾಪ್ರಭುತ್ವದ ಯಶಸ್ವಿಗೆ ಮತ್ತು ಸಮಾಜದ ಜಾಗೃತಿ ಪತ್ರಿಕೆಗಳು ಪೂರಕವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್, ಫೌಜಿಯಾ ಬೇಗಂ ಹಾಗೂ ವಿದ್ಯಾರ್ಥಿಗಳು ಇದ್ದರು.


























