Home ಜಿಲ್ಲೆ ಭಾಲ್ಕಿ ತಾಲೂಕಿನಲ್ಲಿ 24/7 ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದನೆ

ಭಾಲ್ಕಿ ತಾಲೂಕಿನಲ್ಲಿ 24/7 ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದನೆ

ಭಾಲ್ಕಿ:ಜು.3: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಂಡಿದ್ದು ಹಾಗಾಗಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ್ ಅಭಯ ನೀಡಿದ್ದಾರೆ.

ತಾಲೂಕಿನ ಮೋರಂಬಿ ಗ್ರಾಮದ ಬಸವಕಲ್ಯಾಣ ರಸ್ತೆಯ ಹೊಸ ಬಡಾವಣೆಯಲ್ಲಿ ಬುಧವಾರ ಹೊಸದಾಗಿ ಕೊರೆಯುತ್ತಿದ್ದ ಕೊಳವೆ ಬಾವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

ಜೂನ್ ತಿಂಗಳಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಹಾಗಾಗಿ ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಯಿದೆ. ಹಾಗಾಗಿ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿ ಪರಿಗಣಿಸುವಂತೆ ಈಗಾಗಲೇ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

24/7 ಕುಡಿಯುವ ನೀರಿನ ಬಗ್ಗೆ ದೂರು ಸ್ವೀಕರಿಸಲು ಪಂಚಾಯತಿ ಅಧಿಕಾರಿಗಳು ಸಿದ್ಧರಿದ್ದಾರೆ.

ಆದ್ದರಿಂದ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಅನಗತ್ಯವಾಗಿ ಪಂಚಾಯಿತಿಗೆ ಬೀಗ ಹಾಕುವುದು, ರಸ್ತೆ ತಡೆ ಮತ್ತು ಪ್ರತಿಭಟನೆ ಮಾಡುವಂತಹದ್ದು ಯಾವುದೇ ಕಾರಣಕ್ಕೂ ಮಾಡಬಾರದು.

ಸಾರ್ವಜನಿಕರ ದೂರಿಗೆ ಒಂದು ವೇಳೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸ್ಪಂದಿಸಿದ್ದರೇ ತಕ್ಷಣ ತಾಲೂಕು ಪಂಚಾಯತಿ ಅಂತವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದರು.


ಕುಡಿಯುವ ನೀರಿಗೆ 1 ಕೋಟಿ ರೂ ಅನುದಾನ

ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದ 24 ಗಂಟೆಯೊಳಗೆ ಸ್ಪಂದಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು ಆಗಿರುವ ಈಶ್ವರ ಖಂಡ್ರೆ ಅವರು ತಾಲೂಕು ಆಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿ ಕುಡಿಯುವ ನೀರು ಪೂರೈಕೆಗೆ 1 ಕೋಟಿ ರೂ ಅನುದಾನ ಬಿಡುಗಡೆಗೊಳಿಸಿದ್ದಾರೆ. ಈಗಾಗಲೇ ನೀರಿನ ಸಮಸ್ಯೆ ಕಂಡು ಬಂದ ಕಡೆಗಳಲ್ಲಿ 26 ಕೊಳವೆ ಬಾವಿ ಕೊರೆಸಲಾಗಿದೆ. ಜತೆಗೆ ನೀರಿನ ಮೂಲ ಲಭ್ಯ ಇರದ 4 ಕಡೆಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. 17 ಕಡೆಗಳಲ್ಲಿ ಖಾಸಗಿ ಜಲಮೂಲ ಬಳಸಿಕೊಂಡು ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ್ ತಿಳಿಸಿದರು.

ಕಳೆದ ಮೇ ತಿಂಗಳಿನಲ್ಲಿ ಮೋರಂಬಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ಕೂಡಲೇ ಸ್ಪಂದಿಸಿ ಹೊಸ ಕೊಳವೆ ಬಾವಿ ಕೊರೆಸಿ ಅದಕ್ಕೆ ಮೋಟಾರ್ ಅಳವಡಿಸಲಾಗಿತ್ತು. ಆದರೆ ಈ ಕೊಳವೆ ಬಾವಿಗೆ ನೀರಿನ ಮೂಲ ಕಡಿಮೆ ಇರುವ ಕಾರಣಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ವ್ಯವಸ್ಥೆ ಮಾಡಲಾಗಿತ್ತು. ಆದರೆ ಬಡಾವಣೆಯ ನಾಗರಿಕರು ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಕಳೆದ ಎರಡು ದಿನಗಳ ಹಿಂದೆ ರಸ್ತೆ ತಡೆ ಮಾಡಿದ್ದರು. ಹಾಗಾಗಿ ಯಾವುದೇ ಕಾರಣಕ್ಕೂ ಸಾರ್ವಜನಿಕರು ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಈ ಗ್ರಾಮದಲ್ಲಿ ಬುಧವಾರ ಮತ್ತೊಂದು ಹೊಸದಾಗಿ ಕೊಳವೆ ಬಾವಿ ಕೊರೆಸಿರುವುದಾಗಿ ತಿಳಿಸಿದರು.

ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಎಷ್ಟೇ ಕೊಳವೆ ಬಾವಿ ಕೊರೆದರು ಕಡಿಮೆ ನೀರಿನ ಅಭಾವವಿರುವುದರಿಂದ ನೀರು ದೊರೆಯುತ್ತಿಲ್ಲ. ತಾಲೂಕು ಆಡಳಿತ ಮಾಡುವ ತಾತ್ಕಾಲಿಕ ಟ್ಯಾಂಕರ್ ನೀರು, ಖಾಸಗಿ ನೀರು ಹೀಗೆ ಕೆಲವು ಪರ್ಯಾಯ ವ್ಯವಸ್ಥೆಗೆ ಸಾರ್ವಜನಿಕರು ಸಹಕರಿಸಬೇಕು. ಸಚಿವ ಈಶ್ವರ ಖಂಡ್ರೆ ಅವರ ನಿರಂತರ ಪ್ರಯತ್ನದಿಂದ ಮುಂದಿನ ಬೇಸಿಗೆಯೊಳಗೆ 160 ಜನವಸತಿಗಳ ಪೈಕಿ 132 ಜನವಸತಿಗಳಿಗೆ ಬಹುಗ್ರಾಮ ನೀರು ಸರಬರಾಜು ಯೋಜನೆಯಡಿ ಕುಡಿಯುವ ನೀರಿನ ಪೂರೈಕೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಭರವಸೆ ನೀಡಿದರು.