
ಶಹಾಪುರ:ಜು.3: ತಾಲೂಕಿನ ಹೊತಪೇಠ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಮುಖ್ಯ ರಸ್ತೆಯಿಂದ ಗ್ರಾಮ ಪಂಚಾಯಿತಿ ಕಚೇರಿವರೆಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿ ಕಂಕರ್ ಹಾಕಲಾಗಿದೆ. ಆದರೆ ಹಲವು ತಿಂಗಳುಗಳು ಕಳೆದರೂ ಡಾಂಬರೀಕರಣ ಕಾಮಗಾರಿ ಪೂರ್ಣಗೊಳ್ಳದ ಕಾರಣ ರಸ್ತೆ ಸಂಪೂರ್ಣ ಕಂಕರ್ಮಯವಾಗಿದ್ದು, ಸಾರ್ವಜನಿಕರು ನಿತ್ಯ ಸಂಚಾರಕ್ಕೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಗ್ರಾಮದಿಂದ ಶಹಾಪುರ ಪಟ್ಟಣಕ್ಕೆ ಪ್ರತಿದಿನ ನೂರಾರು ಜನರು ಉದ್ಯೋಗ, ವ್ಯಾಪಾರ, ಶಿಕ್ಷಣ ಹಾಗೂ ಇತರೆ ಅಗತ್ಯ ಕೆಲಸಗಳಿಗಾಗಿ ಸಂಚರಿಸುತ್ತಾರೆ. ಆದರೆ ರಸ್ತೆಯ ದುಸ್ಥಿತಿಯಿಂದ ದ್ವಿಚಕ್ರ ವಾಹನ ಸವಾರರು ಜೀವಭಯದಲ್ಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಂಕರ್ನಿಂದಾಗಿ ಹಲವು ಬಾರಿ ವಾಹನಗಳು ಜಾರಿ ಬಿದ್ದು ಅಪಘಾತಗಳು ಸಂಭವಿಸಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಟಂಟಂ ಆಟೋ ಚಾಲಕರು ಹಾಗೂ ಮಾಲೀಕರು ರಸ್ತೆ ಹದಗೆಟ್ಟಿರುವುದರಿಂದ ವಾಹನಗಳ ಬಿಡಿಭಾಗಗಳು ಆಗಾಗ ಹಾಳಾಗುತ್ತಿದ್ದು, ಆದಾಯಕ್ಕಿಂತ ದುರಸ್ತಿ ವೆಚ್ಚವೇ ಹೆಚ್ಚಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದೇ ಕಾರಣದಿಂದ ಕೆಲವು ಬಸ್ಗಳ ಸಂಚಾರವೂ ಅಸ್ತವ್ಯಸ್ತಗೊಂಡಿದೆ ಎನ್ನಲಾಗಿದೆ.
ರಾತ್ರಿ ವೇಳೆ ರಸ್ತೆ ಇನ್ನಷ್ಟು ಅಪಾಯಕಾರಿಯಾಗಿದ್ದು, ಗರ್ಭಿಣಿಯರು ಹಾಗೂ ತುರ್ತು ಚಿಕಿತ್ಸೆಗೆ ತೆರಳುವ ರೋಗಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಯುವ ಮುಖಂಡ ಶಶಿಪಾಲ ರೆಡ್ಡಿ, ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ಈ ಹಿಂದೆಯೂ ರಸ್ತೆ ದುರಸ್ತಿ ಹೆಸರಿನಲ್ಲಿ ಮರಂ ಹಾಕಿ ತಿಂಗಳುಗಟ್ಟಲೆ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಕಂಕರ್ ಹಾಕಿ ಹಾಗೆಯೇ ಬಿಟ್ಟಿರುವುದರಿಂದ ಜನರ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ ಎಂದು ದೂರಿದ್ದಾರೆ.
ಗ್ರಾಮದ ಪ್ರಮುಖ ರಸ್ತೆಯಾಗಿರುವುದರಿಂದ ಪ್ರತಿದಿನ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ರೈತರು ಹೊಲಗದ್ದೆಗಳಿಗೆ ತೆರಳುವವರು, ವೃದ್ಧರು, ಮಕ್ಕಳು ಹಾಗೂ ಜಾನುವಾರುಗಳು ಸಹ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಮೇಲೆ ಎದ್ದು ನಿಂತಿರುವ ಕಂಕರ್ಗಳಿಂದ ಸಂಚಾರ ದುಸ್ತರವಾಗಿದೆ.
“ಇದು ಗ್ರಾಮದ ಪ್ರಮುಖ ರಸ್ತೆ. ಪ್ರತಿದಿನ ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರು ಇದೇ ರಸ್ತೆಯನ್ನು ಬಳಸುತ್ತಾರೆ. ಕಂಕರ್ನಿಂದ ರಸ್ತೆ ಸಂಪೂರ್ಣ ಅಪಾಯಕಾರಿಯಾಗಿದೆ. ಸಂಬಂಧಪಟ್ಟ ಇಂಜಿನಿಯರ್ ಬಾಪುಗೌಡ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಇಂತಹ ನಿರ್ಲಕ್ಷ್ಯ ತೋರಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾಮಗಾರಿ ವಿಳಂಬಗೊಳಿಸಿರುವ ಗುತ್ತಿಗೆದಾರನ ಪರವಾನಗಿಯನ್ನೂ ಬ್ಲಾಕ್ಲಿಸ್ಟ್ಗೆ ಸೇರಿಸಬೇಕು.”
- ಸಿದ್ದು ಪಟ್ಟೇದಾರ, ತಾಲ್ಲೂಕು ಅಧ್ಯಕ್ಷರು, ನಮ್ಮ ಕರ್ನಾಟಕ ಸೇನೆ.


























