Home ಜಿಲ್ಲೆ ತಾಳಿಕೋಟೆಯಲ್ಲಿ ರೈತಸಂಘದಿಂದ ಬೃಹತ್ ಪ್ರತಿಭಟನೆ

ತಾಳಿಕೋಟೆಯಲ್ಲಿ ರೈತಸಂಘದಿಂದ ಬೃಹತ್ ಪ್ರತಿಭಟನೆ

ತಾಳಿಕೋಟೆ:ಜು.17: ಬೂದಿಹಾಳ- ಪೀರಾಪೂರ ಏತ ನೀರಾವರಿ ಯೋಜನೆ ಸಂಪೂರ್ಣ ಅನುಷ್ಠಾನಗೊಳಿಸುವುದು ವಿಜಯಪುರ ಜಿಲ್ಲೆ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ವಾಸುದೇವ ಮೇಟಿ ಬಣ) ತಾಲೂಕ ಘಟಕದ ನೇತೃತ್ವದಲ್ಲಿ ರೈತರು ಪಟ್ಟಣದಲ್ಲಿ ಗುರುವಾರರಂದು ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ತಾಳಿಕೋಟೆ ತಾಲೂಕಿನ ಹಾಗೂ ಸುರಪೂರ ಭಾಗದ ರೈತರ ಪ್ರತಿಭಟನಾ ಮೆರವಣಿಗೆಗೆ ಶ್ರೀ ಖಾಸ್ಗತೇಶ್ವರ ಮಠದ ಪರಮ ಪೂಜ್ಯ ಸಿದ್ದಲಿಂಗ ದೇವರು ಚಾಲನೆ ನೀಡಿ ಆಶೀರ್ವಚನ ನೀಡಿದರು. ಅಲ್ಲಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಕತ್ರಿ ಬಜಾರ್, ಶಿವಾಜಿ ಸರ್ಕಲ್, ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್ ಹಾಗೂ ಬಸ್ ನಿಲ್ದಾಣ ಮಾರ್ಗವಾಗಿ ಶ್ರೀ ಬಸವೇಶ್ವರ ವೃತ್ತಕ್ಕೆ ತಲುಪಿ ಅಲ್ಲಿ ಮಾನವ ಸರ್ಪಳಿ ನಿರ್ಮಿಸಿ ಕೆಲ ಹೊತ್ತು ರಸ್ತೆ ತಡೆ ನಡೆಸಿ ಯೋಜನೆ ವಿಳಂಬ ಖಂಡಿಸಿ ಧಿಕ್ಕಾರ ಕೂಗಿದರು.
ನಂತರ ಅಲ್ಲಿ ಸಮಾವೇಶಗೊಂಡ ನೂರಾರು ರೈತರನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘ ಯಾದಗಿರಿ ಜಿಲ್ಲಾ ಅಧ್ಯಕ್ಷ ಮಲ್ಲನಗೌಡ ಹಗರಟಗಿ ಮಾತನಾಡಿ ಸುಮಾರು 935 ಕೋಟಿ ವೆಚ್ಚದ ಈ ನೀರಾವರಿ ಯೋಜನೆ ಮುಕ್ತಾಯ ಹಂತಕ್ಕೆ ಬಂದಿದೆ ಇನ್ನು 160 ಕೋಟಿ ಅನುದಾನದಲ್ಲಿ ಪೂರ್ಣಗೊಳ್ಳಲಿದೆ ಆದರೆ ಜನಪ್ರತಿನಿಧಿಗಳು ಇದಕ್ಕೆ ಇಚ್ಚಾ ಶಕ್ತಿ ತೋರುತ್ತಿಲ್ಲ. ಇದರ ಜೊತೆಗೆ ಈ ಭಾಗದ ರೈತರಿಗೆ ಬೆಳೆ ವಿಮೆ ಪರಿಹಾರ ಸಮರ್ಪಕವಾಗಿ ಸಿಕ್ಕಿಲ್ಲ ಇದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಪರಿಸ್ಥಿತಿ ಹೀಗಿಯೇ ಮುಂದುವರೆದರೆ ಇದಕ್ಕಿಂತಲೂ ಉಗ್ರವಾದ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಎಡೆಯಾಪೂರ ಮಾತನಾಡಿ ಈ ಯೋಜನೆ ಕೆಲವು ತಾಂತ್ರಿಕ ಕಾರಣಗಳಿಂದ ಪೂರ್ಣಗೊಳ್ಳುತ್ತಿಲ್ಲ ಇದಕ್ಕೆ ಕೆಬಿಜೆಎನ್ ಎಲ್ ಅಧಿಕಾರಿಗಳು ಆಸಕ್ತಿ ವಹಿಸಿ ಕೆಲಸ ಮಾಡಬೇಕಾಗಿದೆ ಎಂದರು.
ಮಾಜಿ ಶಾಸಕ ಸೋಮನಗೌಡ ಪಾಟೀಲ ಮಾತನಾಡಿ ನನ್ನ ಶಾಸಕತ್ವದ ಅವಧಿಯಲ್ಲಿ ನಾನು ಸಾಕಷ್ಟು ಪ್ರಯತ್ನ ಮಾಡಿ ಈ ಯೋಜನೆಯನ್ನು ತಂದಿದ್ದೇನೆ ಆದರೆ ಇವತ್ತು ಅದನ್ನು ಪೂರ್ಣಗೊಳಿಸಲು ಪ್ರಯತ್ನ ಮಾಡದೇ ಇರುವುದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ ಎಂದರು.
ರೈತರ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಿಗೆ ಪ್ರತ್ಯೇಕವಾಗಿ ಬರೆದ ಮನವಿಗಳನ್ನು ತಹಶೀಲ್ದಾರ್ ಡಾ.ವಿನಯಾ ಹೂಗಾರ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನಾ ಮೆರವಣಿಗೆಯಲ್ಲಿ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಅಧ್ಯಕ್ಷ ರಾಜುಗೌಡ ಅನಂತ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಮಾಲಿಪಾಟೀಲ, ಗುಲ್ಬರ್ಗ ಜಿಲ್ಲಾ ಅಧ್ಯಕ್ಷ ಶಾಂತಗೌಡ ಮಾಲಿಪಾಟೀಲ, ರೈತ ಮುಖಂಡರಾದ ಸಂಗನಗೌಡ ಹೆಗರೆಡ್ಡಿ, ಸಿದ್ದು ಬುಳ್ಳಾ, ಮಲ್ಲನಗೌಡ ಪೆÇಲೀಸ್ ಪಾಟೀಲ, ರಾಜುಗೌಡ ಕೋಳೂರ, ಸುರೇಶಕುಮಾರ ಇಂಗಳಗಿ, ಪ್ರಭುಗೌಡ ನಾಡಗೌಡ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಮುನ್ನೆಚ್ಚರಿಕೆ ಕ್ರಮವಾಗಿ ಸಿಪಿಐ ಮೊಹಮ್ಮದ್ ಫಸಿಯುದ್ದೀನ, ಪಿಎಸ್‍ಐ ಜ್ಯೋತಿ ಖೋತ್ ನೇತೃತ್ವದಲ್ಲಿ ಪೆÇಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕೈಗೊಂಡಿತ್ತು.

ಬೂದಿಹಾಳ-ಫೀರಾಪೂರ ಏತನೀರಾವರಿ ಯೋಜನೆಯ ಅನುಷ್ಠಾನಕ್ಕೆ 935 ಕೋಟಿ ಅನುದಾನವನ್ನು ತಂದಿದ್ದೇನೆ ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಕೊನೆಯದಾಗ ಎಫ್‍ಆಯ್‍ಸಿ ಕಾಲುವೆ ನಿರ್ಮಾಣಕ್ಕೆ 160 ಕೋಟಿ ಅನುದಾನ ಬೇಕಿದೆ ಅದು ಸರ್ಕಾರ ನೀಡಲು ಮೀನಮೇಷ ಏಣಿಸುತ್ತಿದೆ ಕೂಡಲೇ ಸರ್ಕಾರದ ಅನುದಾನ ಬಿಡುಗಡೆ ಮಾಡದಿದ್ದಲ್ಲಿ ಯೋಜನೆಗೆ ಬಳಿಸಿದ ಸಾವಿರ ಕೋಟಿ ಹಣ ವ್ಯರ್ಥವಾಗಿ ಹಾಳಾಗಿ ಹೋಗಲಿದೆ.
                                ಸೋಮನಗೌಡ ಪಾಟೀಲ(ಸಾಸನೂರ)
                                   ಮಾಜಿ ಶಾಸಕರು ದೇ.ಹಿಪ್ಪರಗಿ