
ಯಾದಗಿರಿ: ವಡಗೇರಿ ತಾಲ್ಲೂಕಿನ ಬಬಲಾದ್ ಗ್ರಾಮಕ್ಕೆ ಯಾದಗಿರಿಯಿಂದ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಭಾರೀ ಗಾತ್ರದ ಗುಂಡಿಗಳು ಉಂಟಾಗಿದ್ದು, ವಾಹನ ಸವಾರರು ನಿತ್ಯ ಜೀವಭಯದಲ್ಲಿ ಸಂಚರಿಸುವಂತಾಗಿದೆ ಎಂದು ಗುಲಸರಂ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗೌತಮ್ ಕ್ರಾಂತಿ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು, ಹಲವೆಡೆ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ಮಳೆ ಬಂದಾಗ ಅವು ನೀರಿನಿಂದ ತುಂಬಿ ಸಣ್ಣ ಕೆರೆಗಳಂತಾಗುವುದರಿಂದ ವಾಹನ ಸವಾರರಿಗೆ ಗುಂಡಿಗಳ ಆಳ ಅಂದಾಜಿಸಲು ಸಾಧ್ಯವಾಗದೆ ಅಪಘಾತಗಳು ಸಂಭವಿಸುತ್ತಿವೆ. ಈಗಾಗಲೇ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ ಎಂದು ತಿಳಿಸಿದ್ದಾರೆ.
ಯಾದಗಿರಿ ಕ್ರಾಸ್‍ನಿಂದ ಬಬಲಾದ್ ಗ್ರಾಮವರೆಗೆ ಸುಮಾರು 3 ಕಿ.ಮೀ. ರಸ್ತೆ ಇದೇ ದುಸ್ಥಿತಿಯಲ್ಲಿದ್ದು, ದ್ವಿಚಕ್ರ ವಾಹನಗಳು, ಟಂಟಂ ಹಾಗೂ ಇತರ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ರಾತ್ರಿ ವೇಳೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವವರಿಗೆ ಗುಂಡಿಗಳು ಕಾಣಿಸದ ಕಾರಣ ಅಪಘಾತದ ಅಪಾಯ ಮತ್ತಷ್ಟು ಹೆಚ್ಚಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಸಿಸಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಹಿಂದೆ ಗ್ರಾಮ ಪಂಚಾಯಿತಿಯಿಂದ ತಾತ್ಕಾಲಿಕವಾಗಿ ಮಣ್ಣಿನ ದುರಸ್ತಿ ಮಾಡಲಾಗುತ್ತಿತ್ತು. ಆದರೆ ಈಗ ಪಂಚಾಯಿತಿ ಅಸ್ತಿತ್ವದಲ್ಲಿಲ್ಲದ ಕಾರಣ ರಸ್ತೆಯ ನಿರ್ವಹಣೆಗೆ ಯಾರೂ ಮುಂದಾಗುತ್ತಿಲ್ಲ ಎಂದು ದೂರಿದರು.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಸಾರ್ವಜನಿಕರ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ ಎಂದು ಹೇಳಿದರು.
ತಕ್ಷಣವೇ ರಸ್ತೆಯಲ್ಲಿರುವ ಭಾರೀ ಗುಂಡಿಗಳನ್ನು ಮಣ್ಣು ತುಂಬಿಸಿ ತಾತ್ಕಾಲಿಕವಾಗಿ ದುರಸ್ತಿ ಮಾಡಬೇಕು. ಬಳಿಕ ಶಾಶ್ವತವಾಗಿ ಡಾಂಬರು ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಾರ್ವಜನಿಕರನ್ನು ಒಳಗೊಂಡು ಉಗ್ರ ಹೋರಾಟ ನಡೆಸಲಾಗುವುದು ಎಂದು ಗೌತಮ್ ಕ್ರಾಂತಿ ಎಚ್ಚರಿಕೆ ನೀಡಿದ್ದಾರೆ.






























