
ಬೆಂಗಳೂರು,ಆ.೨೩- ಸಿನಿಮೀಯ ರೀತಿಯಲ್ಲಿ ನೂರಾರು ಜನರ ಮುಂದೆಯೇ ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಮಡಿವಾಳದ ಮುಖ್ಯರಸ್ತೆಯಲ್ಲಿ ನಡೆದಿದೆ.
ಮಂಗಮ್ಮನಪಾಳ್ಯದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ ಮಂಗಮ್ಮನ ಪಾಳ್ಯದ ಸುಹೇಲ್ ಕೊಲೆಯಾದವರು. ನಿನ್ನೆ ರಾತ್ರಿ ಸುಮಾರು ೧೦ ಗಂಟೆಯ ವೇಳೆಗೆ ಸುಹೇಲ್ ಮಡಿವಾಳದಿಂದ ಕೊರಮಂಗಲ ಕಡೆಗೆ ತಮ್ಮ ಹಾರ್ಲೆ ಡೇವಿಡ್‌ಸನ್ ಬೈಕ್‌ನಲ್ಲಿ ತೆರಳುತ್ತಿದ್ದರು.
ಈ ವೇಳೆ ಟ್ರಾಫಿಕ್ ಜಾಮ್‌ನಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದಾಗ, ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ಗ್ಯಾಂಗ್ ಏಕಾಏಕಿ ತಲ್ವಾರ್‌ಗಳಿಂದ ಅವರ ಮೇಲೆ ಮುಗಿಬಿದ್ದಿದೆ. ನೂರಾರು ಜನರ ಕಣ್ಣೆದುರೇ ಸುಹೇಲ್ ಅವರನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಶಬೀರ್ ಕೊಲೆಗೆ ಪ್ರತೀಕಾರ:
ಕಳೆದ ಜ. ೧೩ ರಂದು ಬಂಡೆಪಾಳ್ಯದಲ್ಲಿ ರೌಡಿಶೀಟರ್ ಶಬೀರ್ ಕೊಲೆ ನಡೆದಿತ್ತು. ಆ ಕೊಲೆ ಪ್ರಕರಣದಲ್ಲಿ ಸುಹೇಲ್ ಸಹೋದರರಾದ ಖಲೀಂ, ನಜೀರ್ ಹಾಗೂ ಇನ್ನೊಬ್ಬ ಸಹೋದರ ಆರೋಪಿಗಳಾಗಿದ್ದರು. ಈ ಪೈಕಿ ಖಲೀಂ ಇನ್ನೂ ಜೈಲಿನಲ್ಲಿದ್ದರೆ, ನಜೀರ್ ಒಂದು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದನು.
ಸುಹೇಲ್ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರದೆ ಮೆಡಿಕಲ್ ಶಾಪ್ ನಡೆಸಿಕೊಂಡು ಸಾಮಾನ್ಯ ಜೀವನ ನಡೆಸುತ್ತಿದ್ದರು. ಸಹೋದರರ ಮೇಲಿನ ಹಗೆತನಕ್ಕೆ ಶಬ್ಬಿರ್ ಸಹಚರರೇ ಮುಗ್ಧ ಸುಹೇಲ್‌ನನ್ನು ಗುರಿಯಾಗಿಸಿಕೊಂಡು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.
ಸುಹೇಲ್ ಕೊಲೆ ಸಂಬಂಧ ಕೆಲ ದಿನಗಳಿಂದಲೇ ಆರೋಪಿಗಳು ಸಂಚು ರೂಪಿಸಿ ಆತನ ಚಲನವಲನ ಗಮನಿಸಿ ಪೂರ್ವ ನಿಯೋಜಿತ ಸಂಚಿನಂತೆ ಕೃತ್ಯ ನಡೆಸಿ ಬಳಿಕ ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಸಾಕಿ ಪರಾರಿಯಾಗಿದ್ದಾರೆ.
ತಮ್ಮನ ಶಪಥ:
ಕೊಲೆ ನಡೆದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಹೋದರ ನಜೀರ್, “ಸುಹೇಲ್ ನನಗೆ ಕೇವಲ ಅಣ್ಣನಾಗಿರಲಿಲ್ಲ, ಅಪ್ಪನ ಸ್ಥಾನದಲ್ಲಿದ್ದ. ಈ ಕೃತ್ಯ ಎಸಗಿದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ” ಎಂದು ಶಪಥ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಮಡಿವಾಳ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಹಂತಕರ ಪತ್ತೆಗಾಗಿ ಬಲೆ ಬೀಸಿದ್ದಾರೆ.
ತನಿಖೆಗೆ ೩ ತಂಡ ರಚನೆ:
ಕೊಲೆ ಪ್ರಕರಣ ಸಂಬಂಧ ಮೂರು ವಿಶೇಷ ತಂಡಗಳ ರಚನೆ ಮಾಡಲಾಗಿದ್ದು, ಕೊಲೆಯಾದ ಸ್ಥಳ ಸೇರಿ ಅಕ್ಕಪಕ್ಕದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದು ಹಂತಕರ ಚಲನವಲನಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.
ಮಂಗಮ್ಮನ ಪಾಳ್ಯ ನಿವಾಸಿ ಸುಹೇಲ್ ಮಡಿವಾಳ ಮುಖ್ಯರಸ್ತೆ ಕಡೆ ಬಂದಿದ್ದೇಕೆ? ಸುಹೇಲ್ ಮೆಡಿಕಲ್ ಸ್ಟೋರಿ ಇರುವುದು ಬೊಮ್ಮನಹಳ್ಳಿಯಲ್ಲಿ. ಮೆಡಿಕಲ್ ಶಾಪ್‌ನಿಂದ ಹೊರಡುವ ವೇಳೆ ಕೊನೆಯದಾಗಿ ಸುಹೇಲ್‌ಗೆ ಕರೆ ಮಾಡಿದ್ದವರು ಯಾರು ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

































