Home ಜಿಲ್ಲೆ ಮಧುರಚೆನ್ನರು ಕನ್ನಡದ ಅಸ್ಮಿತೆಯನ್ನು ಜಗತ್ತಿಗೆ ಪರಿಚಯಿಸಿದ ದಾರ್ಶನಿಕ ಕವಿ: ಸಿ.ಎಂ. ಬಂಡಗಾರ

ಮಧುರಚೆನ್ನರು ಕನ್ನಡದ ಅಸ್ಮಿತೆಯನ್ನು ಜಗತ್ತಿಗೆ ಪರಿಚಯಿಸಿದ ದಾರ್ಶನಿಕ ಕವಿ: ಸಿ.ಎಂ. ಬಂಡಗಾರ

ಸಂಜೆವಾಣಿ ವಾರ್ತೆ,
ವಿಜಯಪುರ, ಆ.೧: ಕನ್ನಡ ನವೋದಯ ಸಾಹಿತ್ಯದ ಶ್ರೇಷ್ಠ ಕವಿ ಮಧುರಚೆನ್ನರು ತಮ್ಮ ಕಾವ್ಯ, ಆಧ್ಯಾತ್ಮಿಕ ಚಿಂತನೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ ದಾರ್ಶನಿಕ ಕವಿಯಾಗಿದ್ದು, ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ಸಾಹಿತಿ ಸಿ.ಎಂ. ಬಂಡಗಾರ ಅಭಿಪ್ರಾಯಪಟ್ಟರು.
ಸಿಂದಗಿ ತಾಲೂಕಿನ ಮೋರಟಗಿ ಗ್ರಾಮದ ಕಲ್ಪವೃಕ್ಷ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಹಾಗೂ ಕಲ್ಪವೃಕ್ಷ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಮಧುರಚೆನ್ನರ ೧೨೩ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಉಪನ್ಯಾಸ ನೀಡಿದರು.
ಭೀಮಾ ನದಿಯ ತಟದಲ್ಲಿ ಬೆಳೆದ ಮಧುರಚೆನ್ನರು ತಮ್ಮ ಕಾವ್ಯದ ಮೂಲಕ ಈ ನೆಲದ ಸಂಸ್ಕೃತಿ, ಜೀವನ ಮೌಲ್ಯಗಳು ಹಾಗೂ ಅಸ್ಮಿತೆಯನ್ನು ಜಾಗತಿಕ ಸಾಹಿತ್ಯಲೋಕಕ್ಕೆ ಪರಿಚಯಿಸಿದರು. ನಿಸರ್ಗ ಮತ್ತು ಆಧ್ಯಾತ್ಮಿಕತೆಯ ಸಮನ್ವಯವನ್ನು ತಮ್ಮ ಕೃತಿಗಳಲ್ಲಿ ಅಭಿವ್ಯಕ್ತಗೊಳಿಸಿದ ಅವರು, ಹಲಸಂಗಿಯನ್ನು ನವೋದಯ ಕಾವ್ಯದ ಪ್ರಮುಖ ಕೇಂದ್ರವನ್ನಾಗಿ ರೂಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಪವೃಕ್ಷ ಕಾಲೇಜಿನ ಪ್ರಾಂಶುಪಾಲ ಎ.ಬಿ. ಸಿಂದಗಿ ಮಾತನಾಡಿ, ಮಧುರಚೆನ್ನರ ಸಾಹಿತ್ಯದ ಮೇಲೆ ಶ್ರೀ ಅರವಿಂದರ ತಾತ್ವಿಕ ಚಿಂತನೆಗಳ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ. ಅನುಭಾವದ ನೆಲೆಯಲ್ಲಿ ಅವರು ರಚಿಸಿದ ಸಾಹಿತ್ಯ ಕನ್ನಡಕ್ಕೆ ಅಪರೂಪದ ಸಂಪತ್ತಾಗಿದ್ದು, ಮುಂದಿನ ಪೀಳಿಗೆಗೆ ದಾರಿದೀಪವಾಗಿದೆ ಎಂದು ಹೇಳಿದರು.
ಮಧುರಚೆನ್ನರ ಕುಟುಂಬ ಸದಸ್ಯರಾದ ಜಗದೀಶ ಗಲಗಲಿ ಹಾಗೂ ಮಹಾದೇವಿ ಗಲಗಲಿ ಕವಿಯ ಜೀವನ, ಸಾಹಿತ್ಯ ಸಾಧನೆ ಮತ್ತು ಆಧ್ಯಾತ್ಮಿಕ ವಿಚಾರಧಾರೆಯನ್ನು ಸ್ಮರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಸದಸ್ಯ ಬಿ.ಆರ್. ಬನಸೋಡೆ, ಕೇವಲ ಏಳನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದರೂ ಮಧುರಚೆನ್ನರು ೨೨ ಭಾಷೆಗಳ ಜ್ಞಾನವನ್ನು ಹೊಂದಿದ್ದ ಅಪರೂಪದ ಪ್ರತಿಭೆಯಾಗಿದ್ದರು ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಶಿವಶರಣಗೌಡ ಬಿರಾದಾರ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯರಾದ ಪುಲಕೇಶಿ ಪುರುಷೋತ್ತಮ ಗಲಗಲಿ, ದಾಕ್ಷಾಯಣಿ ಬಿರಾದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿಗಳಾದ ಅಯ್ಯುಬ್ ದ್ರಾಕ್ಷಿ, ಅಂಜನಾ ಇಜೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸ್ವಾಗತಿಸಿದರು. ಡಾ. ರಮೇಶ ಕತ್ತಿ ವಂದಿಸಿದರು. ಪ್ರೊ. ಜಿ.ಎಂ. ಪಾಟೀಲ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಲಾವಿದ ಭೀಮು ಕಟ್ಟಿಮನಿ ಮತ್ತು ತಂಡದಿAದ ಸಂಗೀತ ಕಾರ್ಯಕ್ರಮಗಳು ನಡೆದವು.