
ಕಾಳಗಿ:ಆ.೨: ಕಳೆದ ವರ್ಷ ಬೆಳೆ ವಿಮೆ ಕಂತು ಪಾವತಿಸಿದ ರೈತರಿಗೆ ಅಂತಿಮ ವಿಮೆ ಪರಿಹಾರ ಬಿಡುಗಡೆಯಾಗಿದ್ದು, ಕಾಳಗಿ ತಾಲೂಕಿನ ಹಲವಾರು ರೈತರ ಖಾತೆಗೆ ಕೇವಲ ?೮೦೦ರಿಂದ ?೧,೩೦೦ರವರೆಗೆ ಮಾತ್ರ ಜಮೆಯಾಗಿರುವುದು ಅಚ್ಚರಿ ಹಾಗೂ ಅನುಮಾನಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಚಿಂಚೋಳಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೆಂಗಟಿ ಆರೋಪಿಸಿದರು.
ಈ ಕುರಿತು ಮಾತನಾಡಿದ ಅವರು, ಆಳಂದ ಸೇಡಂ,ಚಿತ್ತಾಪುರ ಹಾಗೂ ಜೇವರ್ಗಿ ತಾಲೂಕಿನ ಹಲವು ರೈತರಿಗೆ ಕನಿಷ್ಠ ಎಕರೆಗೆ ?೫,೦೦೦ ಹಾಗೂ ಅದಕ್ಕಿಂತ ಹೆಚ್ಚಿನ ವಿಮೆ ಪರಿಹಾರ ದೊರೆತಿರುವ ಮಾಹಿತಿ ಇದೆ. ಆದರೆ ನೆರೆಯ ಕಾಳಗಿ ಮತ್ತು ಚಿಂಚೋಳಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದರೂ, ಇಲ್ಲಿನ ರೈತರಿಗೆ ಮಾತ್ರ ಅತ್ಯಲ್ಪ ಪರಿಹಾರ ದೊರೆತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದರು.
ಕಾಳಗಿ-ಚಿಂಚೋಳಿ ತಾಲೂಕಿನಲ್ಲಿ ಬೆಳೆ ವಿಮೆ ನೋಂದಣಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ನಡೆದಿತ್ತು. ಇಂತಹ ಪರಿಸ್ಥಿತಿಯಲ್ಲಿ ಇತರೆ ತಾಲೂಕುಗಳಿಗೆ ಹೋಲಿಸಿದರೆ ಕಾಳಗಿಗೆ ಮಾತ್ರ ಕಡಿಮೆ ಪರಿಹಾರ ಬಂದಿರುವುದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಬೆಳೆ ವಿಮೆ ಮಾಡಿಸಿರುವ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನೆರೆಯ ತಾಲೂಕುಗಳಲ್ಲಿ ಬೆಳೆ ಕಟಾವು ಪ್ರಯೋಗ (ಸಿಸಿಇ) ಸಮರ್ಪಕವಾಗಿ ನಡೆದಿದ್ದರೆ, ಕಾಳಗಿ ತಾಲೂಕಿನಲ್ಲಿ ಮಾತ್ರ ಏಕೆ ಸಮರ್ಪಕವಾಗಿ ನಡೆಯಲಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ.ರಾಜಕೀಯ ಚದುರಂಗ ಆಟವೂ, ಅಧಿಕಾರಿಗಳ ನಿರ್ಲಕ್ಷ್ಯವೇ ಅಥವಾ ವಿಮಾ ಕಂಪನಿಯ ಎಡವಟ್ಟೇ ಎಂಬುದನ್ನು ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕೂಡಲೇ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಕಾಳಗಿ-ಚಿಂಚೋಳಿ ತಾಲೂಕಿನ ರೈತರಿಗೆ ನ್ಯಾಯಸಮ್ಮತ ಬೆಳೆ ವಿಮೆ ಪರಿಹಾರ ದೊರಕುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿಜಯಕುಮಾರ ಚೆಂಗಟಿ ಆಗ್ರಹಿಸಿದರು.






























