Home ಜಿಲ್ಲೆ ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲಿ

ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲಿ

ಬೀದರ್: ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅವಧೂತಗಿರಿ ಮಹಾರಾಜ ಕಿವಿಮಾತು ಹೇಳಿದರು.
ಇಲ್ಲಿಯ ಬಸವನಗರ ಕಾಲೊನಿಯ ದತ್ತಗಿರಿ ಮಹಾರಾಜ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ವಿದ್ಯಾರ್ಥಿ ಮಂಡಳಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ನಾಯಕತ್ವವೆಂದರೆ ಅಧಿಕಾರ ಪ್ರದರ್ಶಿಸುವುದಲ್ಲ. ಇತರರಿಗೆ ದಾರಿ ತೋರುವುದು, ಸಹಕರಿಸುವುದು ಹಾಗೂ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುವುದಾಗಿದೆ ಎಂದು ತಿಳಿಸಿದರು.
ಎಲ್ಲರ ಮಾತು ಆಲಿಸಿ, ಸಮಸ್ಯೆ ಅರ್ಥೈಸಿಕೊಂಡು ನಿರ್ಧಾರ ತೆಗೆದುಕೊಳ್ಳುವವ, ಅಧಿಕಾರಕ್ಕಿಂತ ಕರ್ತವ್ಯಕ್ಕೆ ಹೆಚ್ಚು ಮಹತ್ವ ನೀಡುವವ ಉತ್ತಮ ನಾಯಕನಾಗಬಲ್ಲ ಎಂದು ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಹತ್ತಿ ಹೇಳಿದರು.
ಉತ್ತಮ ಅಂಕ ಗಳಿಸುವ ಶಿಕ್ಷಣ ನೀಡುವ ಜತೆಗೆ ಶಿಸ್ತು, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಕಾಳಜಿಯ ನಾಯಕರನ್ನು ರೂಪಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಇಂದಿನ ವಿದ್ಯಾರ್ಥಿಗಳೇ ಭವಿಷ್ಯದ ನಾಯಕರು. ವಿದ್ಯಾರ್ಥಿಗಳು ಶಿಸ್ತು, ಸಂಯಮ ಹಾಗೂ ಸಮಯ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ಆತ್ಮವಿಶ್ವಾಸದೊಂದಿಗೆ ಗುರಿ ಸಾಧನೆಯತ್ತ ಹೆಜ್ಜೆ ಇಡಬೇಕು ಎಂದು ಬರ್ದಿಪುರ ಆಶ್ರಮ ಟ್ರಸ್ಟ್ ಉಪಾಧ್ಯಕ್ಷ ಹಾಗೂ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಅಶೋಕ್ ರೇಜಂತಲ್ ಹೇಳಿದರು.
ವಿದ್ಯಾರ್ಥಿ ಮಂಡಳಿ ಚುನಾವಣೆಯಲ್ಲಿ ಆಯ್ಕೆಯಾದ ಸರ್ವೇಶ್ ಪ್ರಭಾಕರ್ (ಮುಖ್ಯ ವಿದ್ಯಾರ್ಥಿ), ರಸಾನಂದ ವಿಜಯಕುಮಾರ (ಉಪ ಮುಖ್ಯ ವಿದ್ಯಾರ್ಥಿ), ಸಾಕ್ಷಿತಾ ರಾಜಕುಮಾರ (ಮುಖ್ಯ ವಿದ್ಯಾರ್ಥಿನಿ), ಪೂಜಾ ಸುಧಾಕರ (ಉಪ ಮುಖ್ಯ ವಿದ್ಯಾರ್ಥಿನಿ), ಅಭಿಷೇಕ್ ಭರತ್ (ಕ್ರೀಡಾ ನಾಯಕ್), ಶ್ರದ್ಧಾ ಸಂಜೀವಕುಮಾರ (ಶಿಸ್ತು ನಾಯಕ), ಶ್ರದ್ಧಾ ಸಂತೋಷ್ (ಸಾಂಸ್ಕøತಿಕ ನಾಯಕಿ), ಹರ್ಷಿತಾ ಧರ್ಮವೀರ (ಅಸೆಂಬ್ಲಿ ಹೆಡ್), ಭೂಮಿ ರವೀಂದ್ರ (ಬ್ಯಾಂಡ್ ಹೆಡ್) ಹಾಗೂ ಇತರರು ಪದಗ್ರಹಣ ಮಾಡಿದರು.
ರಾಜೋಳಾ ಯೋಗಾಶ್ರಮದ ಪೀಠಾಧಿಪತಿ ರಾಚಯ್ಯ ಸ್ವಾಮಿ, ಸಂಸ್ಥೆಯ ಕಾರ್ಯದರ್ಶಿ ರಮೇಶ್ ಜಿ. ದುಕಾನದಾರ್, ಪ್ರಫುಲ್ ಪಾಂಡೆ, ಪ್ರಿಯಾ ಪಾಂಡೆ, ರೋಹಿತ್ ಮೈಲಾಪುರೆ, ಡಾ. ಸುನೈನಾ ಮೈಲಾಪುರೆ, ಸಂಸ್ಥೆಯ ಆಡಳಿತಾಧಿಕಾರಿ ನಾಗಶೆಟ್ಟಿ ಬಿರಾದಾರ, ಪ್ರಾಚಾರ್ಯೆ ಮಹಾದೇವಿ ಬೀದೆ ಮತ್ತಿತರರು ಇದ್ದರು.