
ಕಲಬುರಗಿ,ಆ.೨: ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ ರಾಯಚೂರು, ಕಲಬುರ್ಗಿಯ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ್ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ವ್ಯಸನ ಮುಕ್ತ ದಿನಾಚರಣೆಯ ಸಾನಿಧ್ಯ ವಹಿಸಿದ ಪರಮಪೂಜ್ಯ ಮಹಾಂತ ಸ್ವಾಮಿಗಳು ಮುದ್ಗಲ್ ಇವರು ಮಾತನಾಡುತ್ತ,ಮಹಾಂತ ಜೋಳಿಗೆ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದ್ದ ಇಳಕಲ್ಲ-ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ೧೯ನೇ ಪೀಠಾಧ್ಯಕ್ಷರಾಗಿದ್ದ ಡಾ. ಮ.ನಿ.ಪ್ರ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ “ವ್ಯಸನ ಮುಕ್ತ ದಿನಾಚರಣೆ” ಯನ್ನು ಕರ್ನಾಟಕ ಸರಕಾರ ಆಚರಿಸಲಾಗುತ್ತಿದೆ. ಕಾರಣ ಪೂಜ್ಯರು ಲಕ್ಷ ಲಕ್ಷ ಜನರನ್ನು ವ್ಯಸನ ದಿಂದ ಮುಕ್ತ ಮಾಡಿದ ಹರಿಕಾರರು. ಈ ದಿನಾಚರಣೆಯ ಹಿಂದೆ ಅವರ ಬದುಕಿನ ತಪಸ್ಸು ಇದೆ. ಅವರ ದೂರ ದೃಷ್ಟಿ ಇದೆ. ಅವರಲ್ಲಿ ಯುವಕರ ಬಗೆಗಿನ ಕಾಳಜಿ ಇತ್ತು. ಅವರು ಇಡೀ ಸಮಾಜ ದುಶ್ಚಟಗಳಿಂದ ದೂರವಿದ್ದರೆ, ವ್ಯಸನ ಮುಕ್ತ ಸಮಾಜ ನಿರ್ಮಾಣವಾಗುತ್ತದೆ. ಅದರಿಂದ ದೇಶ ಪ್ರಗತಿ ಹೊಂದುತ್ತದೆ ಎಂಬ ಉನ್ನತ ವಿಚಾರವನ್ನು ಹೊಂದಿದ್ದರು. ಅದಕ್ಕಾಗಿ ಹಗಲಿರುಳು ಶ್ರಮಿಸಿದರು. ಅವರು ಸಮಾಜ ಸುಧಾರಕರು, ಚಿಂತಕರು, ಯುವ ಜನಾಂಗದ ಪ್ರಗತಿಯ ಹರಿಕಾರರು. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕ್ರಾಂತಿಕಾರಕ ಹೆಜ್ಜೆ ಇಟ್ಟ ಶಿವಯೋಗಿಗಳು,ಸಮಾಜವನ್ನು ವ್ಯಸನ ಮುಕ್ತ ಮಾಡುವುದಕ್ಕಾಗಿ ಮಹಾಂತ ಜೋಳಿಗೆ ಯನ್ನು ಹಿಡಿದುಕೊಂಡು ಜನರ ಮನೆ ಮನೆಗೆ ಹೋಗಿ ದುಡ್ಡು ದುಗ್ಗಾಣಿ ಬೇಡೇನು, ದವಸ ಧಾನ್ಯ ಬೇಡೇನು, ನಿಮ್ಮ ನೆಮ್ಮದಿಯ ಬಾಳಿಗೆಗೆ ನೀಡಿರಯ್ಯ ದುಶ್ಚಟಗಳ ಜೋಳಿಗೆಗೆ ಎಂದು ಬೇಡುವ ಮೂಲಕ ದೇಶವನ್ನು ವ್ಯಸನಮುಕ್ತಗೊಳಿಸಲು ಶ್ರಮಿಸಿದ್ದಾರೆ ಎಂದರು. ನಂತರ ವಿದ್ಯಾರ್ಥಿಗಳಿಗೆ ವ್ಯಸನ ಮುಕ್ತ ಪ್ರತಿಜ್ಞೆ ಬೋಧಿಸಿದರು.
ಕಾರ್ಯಕ್ರಮದ ಅಧ್ಯಕತೆ ವಹಿಸಿ ಮಾತನಾಡಿದ ಪ್ರೊ. ಚನ್ನಾರೆಡ್ಡಿ ಪಾಟೀಲರು, ವಿದ್ಯಾರ್ಥಿಗಳು ಕೆಟ್ಟ ಚಟಗಳಿಗೆ ಒಳಗಾಗದೆ ಉತ್ತಮ ಹವ್ಯಾಸಗಳನ್ನು ಈಗಲೇ ರೂಢಿಸಿಕೊಳ್ಳಬೇಕು, ಇಲ್ಲದಿದ್ದರೆ ಮುಂದೆ ಲಕ್ಷ ಲಕ್ಷ ಹಣ ಸಂಪಾದನೆ ಮಾಡುವಾಗ ಮಾದಕ ವಸ್ತುಗಳ ಚಟಕ್ಕೆ ಒಳಗಾಗಿ ಬದುಕು ಹಾಳು ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಒಂದು ಕುಟುಂಬದ ಒಬ್ಬ ವ್ಯಕ್ತಿ ದುಶ್ಚಟಕ್ಕೆ ಒಳಗಾದರೆ, ಆ ಕುಟುಂಬವೇ ನಾಶವಾಗುತ್ತದೆ.ಯುವಕರು ಈ ದೇಶದ ಆಸ್ತಿ. ಯುವಕರು ಹಾಳಾದರೆ ದೇಶವೇ ಹಾಳಾಗುತ್ತದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಖ್ಯಾತ ಮನೋವೈದ್ಯ ಡಾ. ರಾಹುಲ್ ಮಂದಕನಳ್ಳಿ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ಗುರಿಯನ್ನು ಹೊಂದಿರಬೇಕು.ಗಟ್ಟಿ ಮನಸ್ಸಿನಿಂದ ಸಾಧನೆ ಮಾಡಬೇಕು. ಜೀವನದಲ್ಲಿ ಒಮ್ಮೆ ಫೇಲಾದರೆ ನಿರಾಶೆ ಆಗಬಾರದು, ಮರಳಿ ಮರಳಿ ಪ್ರಯತ್ನಿಸಬೇಕು. ಓದಿನ ಜೊತೆಗೆ ಯೋಗ, ಧ್ಯಾನ, ವ್ಯಾಯಾಮ,ಆರೋಗ್ಯಕ್ಕೆ ಹೆಚ್ಚು ಮಹತ್ವ ಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಗುರುರಾಜ್ ಕುಲಕರ್ಣಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರಶಾಂತ್ ಕುಲಕರ್ಣಿ, ವಿನೂತಾ ಆರ್.ಬಿ., ಪ್ರಭುಗೌಡ ಸಿದ್ಧಾರೆಡ್ಡಿ, ಕರುಣೇಶ್ ಹಿರೇಮಠ, ಗಾಯಕರಾದ ಶಂಕ್ರಯ್ಯ ಆರ್. ಗುರುಮಠ, ತಬಲಾ ವಾದಕರಾದ ಬಸವರಾಜ ಹೊನ್ನಿಗನೂರು ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಮಾರಿ ಸಂಸ್ಕೃತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ. ವಿದ್ಯಾವತಿ ಪಾಟೀಲ ನಿರೂಪಿಸಿದರು.






























