
ಬೆಂಗಳೂರು, ಆ.೩-ಕಾವೇರಿ ಕೊಳ್ಳದಲ್ಲಿ ಮಳೆ ಬಿರುಸು ಪಡೆದಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಜೀವನಾಡಿ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ೧೦೦ ಅಡಿ ಗಡಿ ತಲುಪಿದೆ.
ಕಾವೇರಿ ಹಾಗೂ ಮಲೆನಾಡು ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಹರಿದುಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.
ಕೇವಲ ಮೂರು ದಿನಗಳ ಅಂತರದಲ್ಲೇ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟದಲ್ಲಿ ೮ ಅಡಿ ಏರಿಕೆ ಕಂಡುಬಂದಿದ್ದು, ಪ್ರಸ್ತುತ ೨೩ ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಭಾರೀ ಪ್ರಮಾಣದ ಒಳಹರಿವು ಮುಂದುವರಿದಿದ್ದು, ಇದೇ ವೇಗದಲ್ಲಿ ಇನ್ನು ೧೦ ರಿಂದ ೧೫ ದಿನಗಳ ಕಾಲ ನೀರು ಹರಿದುಬಂದರೆ ಕೆ.ಆರ್.ಎಸ್ ಸಂಪೂರ್ಣ ಭರ್ತಿಯಾಗುವ ನಿರೀಕ್ಷೆಯಿದೆ.
ಹಾಸನ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲೂ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ವರ್ಷ ಇದೇ ದಿನ ೨೯೨೧.೪೦ ಅಡಿ (೩೬.೫೨೩ ಟಿಎಂಸಿ) ನೀರಿತ್ತು. ಆಗ ೫,೨೫೨ ಕ್ಯೂಸೆಕ್ ಒಳಹರಿವು, ನದಿಗೆ ೨,೪೦೦ ಕ್ಯೂಸೆಕ್ ಹಾಗೂ ಕಾಲುವೆಗೆ ೪,೩೦೦ ಕ್ಯೂಸೆಕ್ ಹೊರಹರಿವು ಇತ್ತು.
ಮಲೆನಾಡು ಭಾಗದಲ್ಲಿ ಆರ್ಭಟಿಸುತ್ತಿರುವ ಮಳೆಯಿಂದಾಗಿ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಹರಿದುಬರುವ ಒಳಹರಿವಿನಲ್ಲಿ ಭಾರೀ ಏರಿಕೆಯಾಗಿದೆ. ಒಂದೇ ದಿನದಲ್ಲಿ ಜಲಾಶಯದಲ್ಲಿ ೪ ಟಿಎಂಸಿ ನೀರು ಸಂಗ್ರಹಗೊಂಡಿದ್ದು, ಕೊಪ್ಪಳ ಸೇರಿದಂತೆ ನಾಲ್ಕು ಜಿಲ್ಲೆಗಳ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ
































