Home ಜಿಲ್ಲೆ ಶಿವಮೊಗ್ಗ ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ: ಮಧು

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ: ಮಧು

ಶಿವಮೊಗ್ಗ, ಸೆ.೮- ಮಲೆನಾಡಿನ ಜನರ ಬದುಕಿಗೆ ಧಕ್ಕೆಯನ್ನುಂಟು ಮಾಡುವ ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಲು ಅವಕಾಶ ನೀಡುವುದಿಲ್ಲ. ಮಲೆನಾಡಿನ ಮನೆ ಮನೆಗೂ ರಕ್ಷಣೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅಭಯ ನೀಡಿದರು.


ಕಸ್ತೂರಿ ರಂಗನ್ ವರದಿ ರದ್ದುಪಡಿಸಿ ಮಲೆನಾಡು ಉಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ತೀರ್ಥಹಳ್ಳಿ ಘಟಕದ ವತಿಯಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ನಡೆದ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ತೀರ್ಥಹಳ್ಳಿಯ ಬಿಂತಳದಿಂದ ಆರಂಭಗೊಂಡ ಪಾದಯಾತ್ರೆ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದವರೆಗೆ ಸಾಗಿತು. ಪಾದಯಾತ್ರೆಯುದ್ದಕ್ಕೂ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.


ನಾನು ೨೦೧೩ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದಾಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿದ್ದರು. ಆಗ ಕಸ್ತೂರಿ ರಂಗನ್ ವರದಿ ಕುರಿತು ಸಚಿವ ಸಂಪುಟ ಉಪಸಮಿತಿ ರಚಿಸಲಾಗಿತ್ತು ಈ ಸಮಿತಿಯ ಶಿಫಾರಸಿನಂತೆ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿತ್ತು. ಕಸ್ತೂರಿ ರಂಗನ್ ವರದಿಯನ್ನು ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದೆ. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ವರದಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.


ಇದು ಕೇವಲ ಒಂದು ಅಧಿಸೂಚನೆ ಯನ್ನು ವಿರೋಧಿಸುವ ಹೋರಾಟವಲ್ಲ. ಮಲೆನಾಡಿನ ನೆಲ, ಕೃಷಿ, ಬದುಕು ಹಾಗೂ ಭವಿಷ್ಯವನ್ನು ರಕ್ಷಿಸುವ ಸಂಕಲ್ಪದ ಹೋರಾಟವಾಗಿದೆ. ಪಶ್ಚಿಮ ಘಟ್ಟ ನಮ್ಮ ಹೆಮ್ಮೆ. ಪರಿಸರ ಸಂರಕ್ಷಣೆ ಅಗತ್ಯ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಪರಿಸರದೊಂದಿಗೇ ಬದುಕುತ್ತಿರುವ ಮಲೆನಾಡಿನ ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಯಾವುದೇ ಕ್ರಮವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.


ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಇಂದು ಬಿಜೆಪಿಯವರು ಮಲೆನಾಡಿನ ರೈತರ ಪರವಾಗಿ ಮಾತನಾಡುತ್ತಿರುವುದಾಗಿ ಹೇಳುತ್ತಿದ್ದಾರೆ. ಆದರೆ ೨೦೧೬ರ ಆಗಸ್ಟ್ ೧೧ರಂದು ಕೇಂದ್ರ ಸರ್ಕಾರ ಕರೆದಿದ್ದ ಅತ್ಯಂತ ಮಹತ್ವದ ಸಭೆಗೆ ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಅಂದಿನ ಉಡುಪಿ-ಚಿಕ್ಕಮಗಳೂರು ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ ಅವರು ಭಾಗವಹಿಸಿದ್ದರೇ? ಎಂದು ಪ್ರಶ್ನಿಸಿದ ಅವರು, ಈಗ ಬಿಜೆಪಿಯವರು ಈ ವಿಚಾರದಲ್ಲಿ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿದ್ದಾರೆ ಎಂದು ಟೀಕಿಸಿದರು.


ಕರ್ನಾಟಕ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಹಲವು ಬಾರಿ ಸ್ಪಷ್ಟವಾಗಿ ತಿರಸ್ಕರಿಸಿದೆ. ವಿಧಾನಸಭೆಯಲ್ಲಿಯೂ ವರದಿಯನ್ನು ತಿರಸ್ಕರಿಸುವ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೂ ಕೇಂದ್ರದ ಬಿಜೆಪಿ ಸರ್ಕಾರ ಮತ್ತೆ ಮತ್ತೆ ಅಧಿಸೂಚನೆಗಳನ್ನು ಹೊರಡಿಸುತ್ತಿದೆ. ಇದೀಗ ಏಳನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ ಎಂದರು.


ಮೊದಲ ಆರು ಅಧಿಸೂಚನೆಗಳಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ೧೩೯ ಗ್ರಾಮಗಳನ್ನು ಸೇರಿಸಲಾಗಿತ್ತು. ಇದನ್ನು ತೀರ್ಥಹಳ್ಳಿಯ ಜನರು ಹಾಗೂ ರಾಜ್ಯ ಸರ್ಕಾರ ವಿರೋಧಿಸಿತ್ತು. ಆದರೆ ಇದೀಗ ಅಂತಿಮ ಅಧಿಸೂಚನೆಯ ಹೆಸರಿನಲ್ಲಿ ಗ್ರಾಮಗಳ ಸಂಖ್ಯೆಯನ್ನು ೧೫೪ಕ್ಕೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಸ್ಥಳೀಯ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಈ ವಿಚಾರದಲ್ಲಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಮಧು ಬಂಗಾರಪ್ಪ, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.


ಪಶ್ಚಿಮ ಘಟ್ಟದಲ್ಲಿ ಸಾವಿರಾರು ವರ್ಷಗಳಿಂದ ಜನರು ಬದುಕುತ್ತಿದ್ದಾರೆ. ಕೃಷಿ ಮಾಡುತ್ತಿದ್ದಾರೆ. ಅಡಕೆ, ಭತ್ತ, ಕಾಫಿ, ಮೆಣಸು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ನಾವು ಪರಿಸರ ವಿರೋಧಿಗಳಲ್ಲ; ನಾವೇ ಪರಿಸರದ ಭಾಗ. ಪ್ರಕೃತಿಯೊಂದಿಗೆ ಬದುಕುತ್ತಿರುವವರು ನಮ್ಮ ಮಲೆನಾಡಿನ ರೈತರು ಎಂದು ಹೇಳಿದರು.