Home ಜಿಲ್ಲೆ ಶಿವಮೊಗ್ಗ ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ವಿತರಣೆ

ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ವಿತರಣೆ

ಶಿವಮೊಗ್ಗ, ಸೆ. ೩: ಸ್ವಚ್ಛತಾ ಕಾರ್ಯದಲ್ಲಿ ಹಗಲಿರುಳು ಶ್ರಮಿಸುವ ಪೌರ ಕಾರ್ಮಿಕ ಮಹಿಳೆಯರಿಗೆ, ಬಾಗಿನ ಅರ್ಪಿಸಿ ಗೌರವ ಸಲ್ಲಿಸುವ ಅಪರೂಪದ ಕಾರ್ಯಕ್ರಮವೊಂದು ಶಿವಮೊಗ್ಗ ನಗರದ ಶೋಭಾ ಲೇಔಟ್ ನಲ್ಲಿ ಆಗಸ್ಟ್ ೦೨ ರಂದು ಆಯೋಜನೆಯಾಗಿತ್ತು.


ಕೆಹೆಚ್ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ ಪಾಲಿಕೆ ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಡಾವಣೆಗಳ ನಿವಾಸಿಗಳು ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಮಹಾನಗರ ಪಾಲಿಕೆ ಹಾಗೂ ಅಬ್ಬಲಗೆರೆ ಗ್ರಾಮ ಪಂಚಾಯ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸ್ವಚ್ಛತಾ ಸಿಬ್ಬಂದಿಗಳು ಬಾಗಿನ ಸ್ವೀಕರಿಸಿದರು.


ಇದೇ ವೇಳೆ ಬಡಾವಣೆಯ ಉದ್ಯಾನವನದಲ್ಲಿ ‘ಪ್ರಕೃತಿಗೆ ಬಾಗಿನ’ ಎಂಬ ಪರಿಕಲ್ಪನೆಯಡಿ, ಗಿಡ ನೆಡುವ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು.


ತಾಲೂಕು ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪರಮೇಶ್ವರ್ ಅವರು ಗಿಡ ನೆಟ್ಟು, ನೀರು ಹಾಕುವ ಮೂಲಕ ವಿಧ್ಯುಕ್ತವಾಗಿ ಕಾರ್ಯಕ್ರಮ ಉದ್ಘಾಟಿಸಿದರು. ತದನಂತರ ೮ ಜನ ಪೌರ ಕಾರ್ಮಿಕ ಮಹಿಳೆಯರಿಗೆ ಬಾಗಿನ ಅರ್ಪಿಸಿದರು.


ತಾಪಂ ಇಓ ಪರಮೇಶ್ವರ್ ಅವರು ಮಾತನಾಡಿ, ‘ನಿಜಕ್ಕೂ ಇದೊಂದು ವಿನೂನತ ಕಾರ್ಯಕ್ರಮವಾಗಿದೆ. ನಮ್ಮ ಪ್ರದೇಶಗಳ ಸ್ವಚ್ಛತೆಗೆ ಹಗಲಿರುಳು ಶ್ರಮಿಸುವ ಮಹಿಳಾ ಪೌರ ಕಾರ್ಮಿಕರಿಗೆ ಗೌರವಿಸುವ ಮೂಲಕ ಅವರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸುವ ನಿವಾಸಿಗಳ ಕಾರ್ಯ ಅಭಿನಂದನೀಯ. ಹಾಗೆಯೇ ಪರಸರ ಸಂರಕ್ಷಣೆಗೆ ಕೈಜೋಡಿಸಿರುವುದು ಸ್ವಾಗತಾರ್ಹ ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಜಿಲ್ಲಾ ಪಂಚಾಯ್ತಿ ಸಹ ಕಾರ್ಯದರ್ಶಿ ಸಂತೋಷ್ ಕುಮಾರ್ ಅವರು ಮಾತನಾಡಿ, ‘ಪೌರ ಕಾರ್ಮಿಕರ ನಿಸ್ವಾರ್ಥ ಸೇವೆ ನಮ್ಮೆಲ್ಲರಿಗೂ ಮಾದರಿಯಾಗಿದೆ. ಅವರನ್ನು ಗುರುತಿಸಿ ಅಭಿನಂದಿಸುತ್ತಿರುವುದು ಸಂತಸಕರ’ ಎಂದು ತಿಳಿಸಿದರು.


ಪಿಡಿಓ ರಾಜಪ್ಪ ಹೆಚ್ ಅವರು ಮಾತನಾಡಿ, ‘ಆಡಳಿತದೊಂದಿಗೆ ನಾಗರಿಕರು ಕೈ ಜೋಡಿಸಿದಾಗ ಸಮಾಜದಲ್ಲಿ ಹೊಸ ಬದಲಾವಣೆ ಸಾಧ್ಯವಾಗಲಿದೆ. ಪ್ರಸ್ತುತ ನಾಗರಿಕರು ಹಮ್ಮಿಕೊಂಡಿರುವ ಸಮಾಜಮುಖಿ ಕಾರ್ಯಕ್ರಮವು ಮಾದರಿಯಾಗಿದೆ’ ಎಂದು ಹೇಳಿದರು.


ಜಿಲ್ಲಾ ಅಧಿಕೃತ ಪತ್ರ ಬರಹಗಾರರ ಸಂಘದ ಅಧ್ಯಕ್ಷರಾದ ಜಿ ಎಂ ಸುರೇಶ್ ಬಾಬು ಅವರು ಮಾತನಾಡಿ, ‘ಪರಿಸರ ಸಂರಕ್ಷಣೆಯ ಅಗತ್ಯತೆ ಪ್ರಸ್ತುತ ಹೆಚ್ಚಿದೆ. ನಗರ ಪ್ರದೇಶಗಳಲ್ಲಿ ಗದ್ದೆ-ತೋಟಗಳು ಕಣ್ಮರೆಯಾಗಿ, ಲೇಔಟ್ ಗಳು ತಲೆ ಎತ್ತುತ್ತಿವೆ. ಪ್ರತಿಯೋರ್ವರು ಗಿಡ ಮರ ಸಂರಕ್ಷಣೆಯ ಪ್ರತಿಜ್ಞೆ ಮಾಡಬೇಕಾಗಿದೆ ಎಂದರು.